ಉಡುಪಿ, ಅ. 13 (DaijiworldNews/MB) : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಬಗ್ಗೆ ಮಿಥುನ್ ರೈರವರು ಆಡಿರುವ ಮಾತುಗಳನ್ನು ವಾಪಾಸು ಪಡೆದು ಸಾರ್ವಜನಿಕವಾಗಿ ಯೋಗಿ ಆದಿತ್ಯನಾಥರಲ್ಲಿ ಕ್ಷಮೆಯಾಚಿಸಬೇಕು ಎಂದು ಸಮಸ್ತ ಜೋಗಿ ಸಮಾಜ ಆಗ್ರಹಿಸಿದೆ.



ಇಡೀ ಹಿಂದೂ ಸಮಾಜವೇ ಗುರುಗಳೆಂದು ಪೂಜಿಸುತ್ತಿರುವ ಸ್ವಾಮೀಜಿಗಳ ವಿರುದ್ಧ ನೇರವಾಗಿ ಖಾವಿಯ (ಕೇಸರಿ ವಸ್ತ್ರ) ಬಗ್ಗೆ ಅವಮಾನ ಮಾಡಿ, ಯೋಗಿ ಆದಿತ್ಯನಾಥ್ರೊಳಗಿನ ಯೋಗಿ ಎಂಬ ಪದಕ್ಕೆ, ಈ ರೀತಿಯ ಮಾನಹಾನಿ ಮತ್ತು ಅವಹೇಳನಗಳಿಂದ ಏಕವಚನದಿಂದ ನಿಂದಿಸಿರುವುದು ಸಮಸ್ತ ನಾಥಪಂಥದ ಜೋಗಿ ಸಮುದಾಯದ ಭಾವನೆಗಳಿಗೆ ತೀವ್ರವಾದ ನೋವುಂಟು ಮಾಡಿರುವ ಕಾರಣ ಮಿಥುನ್ ರೈ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಅಖಿಲ ಕರ್ನಾಟಕ ನಾಥಪಂಥದ ಜೋಗಿ ಸಮಾಜ ಸೇವಾ ಸಮಿತಿಯ ರಾಜ್ಯ ಪ್ರದಾನ ಸಂಘಟಕರಾದ ರಮಾನಾಥ್ ಜೋಗಿ ಭಟ್ಕಳ ಇವರು ಒತ್ತಾಯಿಸಿದರು.
ಅವರು ಮಂಗಳವಾರ ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ನಾಥ ಪರಂಪರೆ ಮತ್ತು ಪೀಠಾಧ್ಯಕ್ಷರ ಬಗ್ಗೆ ಅರಿವೇ ಇಲ್ಲದೆ. ಅವಹೇಳನಕಾರಿ ಪದಗಳಿಂದ ನಿಂದಿಸಿ ಇಡೀ ಹಿಂದೂ ಸಮಾಜಕ್ಕೆ ಮತ್ತು ನಾಥಪಂಥದ ಜೋಗಿ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ. ಸನಾತನ ಧರ್ಮಕ್ಕೆ, ಹಿಂದು ಧರ್ಮಕ್ಕೆ ಚ್ಯುತಿ ತಂದಿದ್ದಾರೆ. ಮಿಥುನ್ ರೈ ಅವರು ಮಂಗಳೂರಿನ ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಯೋಗಿ ಆದಿತ್ಯನಾಥ್ ಮಹಾರಾಜ್ ಸ್ವಾಮಿಗಳನ್ನು ನಿಂದಿಸಿದ್ಧಾರೆ. ಯೋಗಿ ಆದಿತ್ಯನಾಥರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮುಖಕ್ಕೆ ಮಸಿ ಬಡಿಯುವುದಾಗಿ ಹೇಳಿರುವ ಮಿಥುನ್ ರೈಗೆ ಯೋಗಿ ಆದಿತ್ಯನಾಥ್ ಅವರ ಇತಿಹಾಸದ ಬಗ್ಗೆ ತಿಳಿದಿಲ್ಲ ಎಂಬುದು ಖಚಿತ. ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಯೋಗಿ ಆದಿತ್ಯನಾಥರ ಅವಿನಾಭಾವ ಸಂಬಂಧ ಇರುತ್ತದೆ ಎಂದು ಹೇಳಿದರು.
ಮಿಥುನ್ ರೈ ಹಿಂದು ನಂಬಿಕೆಗೆ ಚ್ಯುತಿ ತಂದಿದ್ದಾರೆ. ಯಾರೇ ಆದರೂ ಇನ್ನು ಮುಂದೆ ಹಿಂದು ಪರಂಪರೆ ಬಗ್ಗೆ ಲಘುವಾಗಿ ಮಾತಾಡಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ. ಅವರು ರಾಜಕೀಯವಾಗಿ ಏನೇ ಆದರು ವೈಯಕ್ತಿಕವಾಗಿ ನಿಂದಿಸಿರುವುದಕ್ಜೆ ತೀವ್ರವಾದ ಆಕ್ಷೇಪವಿದೆ ಎಂದರು.
ಈಗಾಗಲೇ ಅನೇಕ ಕಡೆ ಮಿಥುನ್ ರೈ ವಿರುದ್ಧ ದೂರು ದಾಖಲಾಗಿದೆ, ಉಡುಪಿಯಲ್ಲೂ ದೂರು ನೀಡುತ್ತೇವೆ ಎಂದರು.
ಶಿವರಾಮ್ ಬಳೆಗಾರ್ ಮುರುಡೇಶ್ವರ, ರಾಜ್ಯ ಕಾರ್ಯದ್ಯಕ್ಷರು, ಸುರೇಶ್ ಜೋಗಿ ಕೋಟೇಶ್ವರ, ಜಿಲ್ಲಾಧ್ಯಕ್ಷರು, ಸತ್ಯನಾರಾಯಣ ಜೋಗಿ, ಕಾರ್ಯದರ್ಶಿ, ಸುರೇಶ್ ಜೋಗಿ ಹೆಬ್ರಿ, ಅಶೋಕ್ ಜೋಗಿ, ಉದಯ್ ಕುಮಾರ್ ಜೋಗಿ, ಬಾಲಕೃಷ್ಣ ಜೋಗಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.