ಕಾರ್ಕಳ, ಅ. 13 (DaijiworldNews/HR): ಸಾಮಾನ್ಯವಾಗಿ ಯಾವುದೇ ಕಲೆ ಅಥವಾ ಇತರೇ ವೃತ್ತಿ ಕಲಿಯಬೇಕಿದ್ದರೆ ಅದಕ್ಕೊಬ್ಬ ಗುರುವಿನ ಬಲವಿರಬೇಕು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸಾಧಿಸುವ ಛಲವಿದ್ದರೆ ಸಬಳವನ್ನೂ ನುಂಗಬಹುದು ಎಂಬ ನಾಣ್ನುಡಿಯಿದೆ, ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬ ಗ್ರಾಮೀಣ ಯುವಕ ಗುರುವಿನ ಸಹಾಯವಿಲ್ಲದೇ ತನ್ನ ಸ್ವಂತ ಪರಿಶ್ರಮದಿಂದ ಕಲೆಯನ್ನು ಸಿದ್ದಿಸಿಕೊಂಡು ಕಲಾಮಾತೆಯನ್ನು ಒಲಿಸಿಕೊಂಡಿದ್ದಾನೆ.





ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ದಾಸಗದ್ದೆ ನಿವಾಸಿ ವಿಜಯ ಎಸ್ ಪರವ ಎಂಬ ದಲಿತ ಸಮುದಾಯದ ಯುವಕ ಯಾರ ನೆರವಿಲ್ಲದೇ ತನ್ನದೇ ಆದ ಯೋಚನೆಯ ಮೂಲಕ ಅತ್ಯದ್ಬುತ ಕೈಚಳಕದಿಂದ ಶಿಲ್ಪಕಲೆ,ಗೋಡೆಬರಹ ಹಾಗೂ ಕೊರೆಯಚ್ಚು ಕಲೆಯನ್ನು ಸಿದ್ದಿಸಿಕೊಂಡು ಸಾಧನೆ ಮಾಡಿರುವ ಛಲಗಾರ.
ಶಾಲಾ ದಿನಗಳಲ್ಲಿಯೇ ವಿಜಯನಿಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವ ಉತ್ಸಾಹವಿತ್ತು. ಆದರೆ ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಹಾಗೂ ದಲಿತ ಸಮುದಾಯದ ವಿದ್ಯಾರ್ಥಿಯಾಗಿದ್ದ ವಿಜಯ ಓದಿನಲ್ಲಿಯೂ ಸಾಕಷ್ಟು ಜಾಣನಾಗಿದ್ದ. ತನ್ನ ಶಾಲಾ ದಿನಗಳಲ್ಲಿ ಗೋಡೆಬರಹ,ಕಲಾಕೃತಿ ನಿರ್ಮಾಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ವಿಜಯ ಪರವ ತನ್ನ ಬಿಡುವಿನವೇಳೆಯಲ್ಲಿ ಯಾರ ನೆರವೂ ಇಲ್ಲದೇ ಕಲೆಯನ್ನು ಕಲಿತು ಕಲಾಮಾತೆಯನ್ನು ಒಲಿಸಿಕೊಂಡವರು.
ವಿಜಯ ಈಗಾಗಲೇ 1500ಕ್ಕೂ ಅಧಿಕ ವಾಲ್ ಪೈಂಟಿಂಗ್ ಚಿತ್ರಗಳನ್ನು ಬರೆದಿದ್ದು, ಸುಮಾರು 150ಕ್ಕೂ ಅಧಿಕ ಶಿಲ್ಪಕಲಾಕೃತಿಗಳನ್ನು ನಿರ್ಮಿಸಿ ಅದನ್ನು ಹಲವು ದೇವಸ್ಥಾನ ಹಾಗೂ ಮ್ಯೂಸಿಯಂಗಳಿಗೆ ಕೊಟ್ಟಿದ್ದಾರೆ. ಇದಲ್ಲದೇ ಗೋಡೆಯ ಮೇಲೆ ಪ್ರಕೃತಿ, ಮರಗಿಡಗಳ ಉಬ್ಬುಶಿಲ್ಪಗಳನ್ನು ಚಿತ್ರಿಸುವುದರಲ್ಲಿಯೂ ಬಹಳ ನಿಸ್ಸೀಮರಾಗಿದ್ದಾರೆ. ಇತ್ತೀಚೆಗೆ ಇವರು ಕೊರೆಯಚ್ಚು ಕಲೆಯ ಮೂಲಕ ಸಾಕಷ್ಟು ಚಿತ್ರಗಳನ್ನು ಬಿಡಿಸಿದ್ದು, ಇವರ ಈ ಸಾಧನೆ ಮಾತ್ರ ಎಲೆಮರೆಯ ಕಾಯಿಯಂತಾಗಿದೆ.
ಗ್ರಾಮೀಣ ಭಾಗದ ದಲಿತ ಸಮುದಾಯದ ವಿಜಯ ಪರವ ತನ್ನ ಕಲೆಯನ್ನು ಪ್ರಚುರಪಡಿಸದೇ ಕೇವಲ ಜೀವನಾಧಾರಕ್ಕಾಗಿ ಬಳಸಿಕೊಂಡಿದ್ದಾರೆ. ಇವರ ಅದ್ಭುತ ಕಲಾ ನೈಪುಣ್ಯತೆಯನ್ನು ಗುರುತಿಸುವ ಕೆಲಸವನ್ನು ಯಾವ ಇಲಾಖೆಯೂ ಮಾಡಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ಗ್ರಾಮೀಣ ಯುವಕ ಸಾಧನೆಯನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕಿದೆ. ಸ್ವಯಂ ಪ್ರೇರಿತರಾಗಿ ಕಲಾತ್ಮಕ ಪ್ರತಿಭೆಯನ್ನು ಹೊಸ ಜಗತ್ತಿಗೆ ಪರಿಚಯಿಸಿದ ಯುವಕನ ಸಾಧನೆಯು ಮಾದರಿಯಾಗಿದೆ. ಇದನ್ನು ಗುರಿತಿಸಿ ಸೂಕ್ತ ರೀತಿಯಲ್ಲಿ ಸ್ವಂದಸಿ ಪ್ರೋತ್ಸಾಹಿಸುವ ಹೊಣೆಗಾರಿಕೆ ಸರಕಾರದಾಗಿದೆ.