ಬೆಂಗಳೂರು, ಮೇ 19: ಬಹುಮತ ಇಲ್ಲದೆಯೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚನೆ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿ ರಾಜೀನಾಮೆ ನೀಡಿದ್ದಾರೆ.
104 ಸ್ಥಾನ ಗೆದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಆಹ್ವಾನ ನೀಡಿದ್ದರು. ಅದರಂತೆ, ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದ ಹಿನ್ನೆಲೆ, ರಾಜ್ಯಪಾಲರಿಗೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು 15 ದಿನಗಳ ಗಡುವು ನೀಡಿದ್ದರು. ಆದರೆ, ಕಾಂಗ್ರೆಸ್–ಜೆಡಿಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶನಿವಾರ ಸಂಜೆಯೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಬಿಜೆಪಿಗೆ ಸೂಚನೆ ನೀಡಿತ್ತು.
ವಿಧಾನಸಭೆಯ 222 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 78 ಸ್ಥಾನ ಗೆದ್ದ ಕಾಂಗ್ರೆಸ್ ಮತ್ತು 38 ಸ್ಥಾನ ಗೆದ್ದ ಜೆಡಿಎಸ್, ಇಬ್ಬರು ಪಕ್ಷೇತರನ್ನೂ ಸೇರಿಸಿಕೊಂಡು ಮೈತ್ರಿ ಸರ್ಕಾರ ರಚಿಸುವ ಪ್ರಸ್ತಾವವನ್ನು ರಾಜ್ಯಪಾಲರ ಮುಂದಿಡಲಾಗಿತ್ತು.