ಬೆಂಗಳೂರು, ಮೇ 19: ನಾನು ಬದುಕಿರುವವರೆಗೂ ನನ್ನ ಜೀವನವನ್ನು ರೈತರಿಗಾಗಿ ಮುಡಿಪಾಗಿಡುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಭಾಷಣ ಮಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಧನ್ಯವಾದ ಹೇಳಿ ಮಾತು ಆರಂಭಿಸಿದ್ದರು. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ 1ಲಕ್ಷದವರೆಗಿನ ರೈತರ ಸಾಲ, ನೇಕಾರರ ಸಮುದಾಯದ ಸಾಲ ಮನ್ನಾ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಸೋತ ನಂತರ ಎರಡೂ ಪಕ್ಷಗಳೂ ಅವಕಾಶವಾದಿ ಹೊಂದಾಣಿಕೆ ರಾಜಕಾರಣ ಮಾಡಿದರು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿತ್ತು. ದೊಡ್ಡ ಪಕ್ಷ ಎಂಬ ವಿಚಾರ ಪರಿಗಣಿಸಿ ರಾಜ್ಯಪಾಲರು ನಮಗೆ ಆಮಂತ್ರಣ ಕೊಟ್ಟರು. ಹಿಂದಿನ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧವಾಗಿ ನಮಗೆ 104 ವಿಧಾನಸಭಾ ಕ್ಷೇತ್ರದಲ್ಲಿ ಜನರು ಆಶೀರ್ವಾದ ಮಾಡಿದರು. ನನ್ನ ಹಿಂದಿನ ಆಡಳಿತ ಮತ್ತು ಮೋದಿ ಅವರ ಮೇಲೆ ಜನರಿಗೆ ವಿಶ್ವಾಸ ಇತ್ತು ಎಂದು ಹೇಳಿದ್ದಾರೆ.
ಇಲ್ಲಿ ನಮಗೆ ಏನೂ ಕೊರತೆಯಿಲ್ಲ. ಸಾಕಷ್ಟು ನೈಸರ್ಗಿಕ ಸಂಪನ್ಮೂಲವಿದೆ. ಆದರೆ ಪ್ರಾಮಾಣಿಕತೆಯ ಕೊರತೆ ಕಾಣಿಸಿಕೊಂಡಿದೆ. ಅಂಥದ್ದೇ ಸಂದರ್ಭದಲ್ಲಿ ಚುನಾವಣೆ ನಡೆಯಿತು. ರೈತರಿಗಾಗಿ ನಿರಂತರ ಹೋರಾಟ, ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಜನರ ಸೇವೆ ಮಾಡಬೇಕು ಎನ್ನುವ ಹಂಬಲ ನನ್ನಲ್ಲಿದೆ. ನನ್ನ ಬದುಕಿನ ಕೊನೆಯ ಉಸಿರು ಇರುವವರೆಗೆ ನಾಡಿನ ರೈತರ ಸೇವೆಗೆ ಮುಡಿಪಾಗಿಡ್ತೀನಿ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ರಾಜ್ಯದ ಜನ 113 ಸ್ಥಾನ ನೀಡಿದ್ದರೆ ರಾಜ್ಯದ ಚಿತ್ರಣವೇ ಬೇರೆ ಇರುತ್ತಿತ್ತು. ಇದು ಮೊದಲಲ್ಲ. ನನ್ನ ಜೀವನದ ಉದ್ದಗಲಕ್ಕೂ ಅಗ್ನಿಪರೀಕ್ಷೆ ಎದುರಿಸಿದ್ದೇನೆ. ಅಧಿಕಾರ ಸಿಗಲಿ ಬಿಡಲಿ, ಜನರಿಗಾಗಿ ಸೇವೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ನಾಯಕರ ಕುತಂತ್ರದಿಂದ ಜನಾದೇಶಕ್ಕೆ ಹಿನ್ನಡೆಯಾಗಿದೆ. ಅಧಿಕಾರ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುತ್ತೀನಿ ಅಂತ ಕೆಲವರು ಹೇಳಿದ್ದರು. ನಾನು ಹಾಗಲ್ಲ. ಜನರಿಗಾಗಿ ಪ್ರಾಣ ಕೊಡ್ತೀನಿ. ಆಶೀರ್ವಾದ ಮಾಡಿದ ರಾಜ್ಯದ ಜನತೆಗೆ ಕೃತಜ್ಞೆ ಸಲ್ಲಿಸುತ್ತೇನೆ ಎಂದು ಹೇಳಿದರು.