ಉಡುಪಿ, ಅ. 13 (DaijiworldNews/SM): ಅದೆಷ್ಟೋ ದಶಕಗಳಿಂದ ಹೊಂಡಗುಂಡಿಯಿದ್ದ ಮೂಡುಬೆಳ್ಳೆ ಗ್ರಾಮದ ಗುಡ್ಡಬೆಡ್ಡುವಿನ ಗ್ರಾಮಸ್ಥರಿಗೆ ಇದೀಗ ಕಾಂಕ್ರೀಟ್ ರಸ್ತೆಯ ಭಾಗ್ಯ ಸಿಕ್ಕಿದೆ. ಕೊನೆಗೂ ಗ್ರಾಮಸ್ಥರ ಅವಿರತ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.


ಹೌದು, ಸುಮಾರು ಕಳೆದ 13 ವರ್ಷಗಳಿಂದ ಹೊಂಡಗುಂಡಿ ಕೆಸರುಮಯ ರಸ್ತೆಯಿಂದ ಅಲ್ಲಿನ ಗ್ರಾಮಸ್ಥರು ಜೀವನ ಹೈರಾಣವಾಗಿತ್ತು. ಯಾರೇ ಪಕ್ಷದ ಪ್ರತಿನಿಧಿ ಗೆದ್ದು ಬಂದರೂ ಕೊನೆ ಪಕ್ಷ ರಸ್ತೆಗೆ ಹೊಂಡ ಮುಚ್ಚುವ ಕೆಲಸವನ್ನು ಮಾಡಿರಲಿಲ್ಲ. ಇಲ್ಲಿ ಚುನಾವಣೆ ಸಂದರ್ಭ ಪ್ರಚಾರಕ್ಕೆ ಬರುವ ಜನಪ್ರತಿನಿಧಿಗಳು ಚುನಾವಣೆ ಆದ ನಂತರ ಇತ್ತ ತಿರುಗಿಯೂ ನೋಡ್ತಾ ಇರಲಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶವಾಗಿತ್ತು.
ಈ ಭಾಗದಲ್ಲಿ ಸುಮಾರು 40 ರಿಂದ 50 ರಷ್ಟು ಮನೆಗಳಿದ್ದು ಪ್ರತಿನಿತ್ಯ ನೂರಾರು ಮಂದಿ ಅದೇ ಜಲ್ಲಿ ಕಲ್ಲು ಹರಡಿದ ರಸ್ತೆಯಲ್ಲಿ ಓಡಾಡುತ್ತಿದ್ದರು. ಈ ಬಾರಿಯಂತೂ ರಸ್ತೆಯ ಅವ್ಯವಸ್ಥೆ ಕಂಡು ಬೇಸತ್ತ ಜನ ಗುಡ್ಡೇಬೆಟ್ಟು-ಅಂಕುದ್ರು- ಲಯನ್ಸ್ ಕ್ಲಬ್ ರಸ್ತೆ ರಿಪೇರಿಯಾಗದಿದ್ದರೆ ಸ್ಥಳೀಯ ಚುನಾವಣೆಯನ್ನು ಬಹಿಷ್ಕಾರ ಹಾಕುವ ನಿರ್ಧಾರವನ್ನು ತೆಗೆದು ಕೊಂಡಿದ್ದರು.
ಈ ಗ್ರಾಮದ ಜನರು ತೊಂದರೆ ಪಡುವುತ್ತಿರುವುದರ ಬಗ್ಗೆ ಡಾಯ್ಜಿವರ್ಲ್ಡ್ ವಾಹಿನಿಯಲ್ಲಿ ಸುಧೀರ್ಘವಾಗಿ ವರದಿಯನ್ನು ಪ್ರಸಾರ ಮಾಡಿತ್ತು. ನಮ್ಮ ಜವಾಬ್ದಾರಿಯಾಯನ್ನು ಅಲ್ಲಿಗೆ ನಿಲ್ಲಿಸದೇ ಸ್ಥಳೀಯ ಕಾಪು ಶಾಸಕರಾದ ಲಾಲಾಜಿ ಮೆಂಡನ್ ಅವರಿಗೆ ಅಲ್ಲಿನ ವಾಸ್ತವ ಮತ್ತು ರಸ್ತೆಯ ಅಗತ್ಯತೆ ಎಷ್ಟಿದೆ ಎಂಬುದರ ಬಗ್ಗೆ ಮನವರಿಕೆ ಕೂಡ ಮಾಡಿದ್ದೆವು.
ಈ ವರದಿಯ ಫಲಶ್ರುತಿಯಾಗಿ ತಕ್ಷಣ ಕಾಪುವಿನ ಶಾಸಕರು ಸ್ಪಂದಿಸಿ, ಬೇರೆ ರಸ್ತೆಯು ಸೇರಿದಂತೆ ಮಳೆಗಾಲದ ಒಳಗಾಗಿ ಗುಡ್ಡೇಬೆಟ್ಟು-ಅಂಕುದ್ರು- ಲಯನ್ಸ್ ಕ್ಲಬ್ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು ಅಲ್ಲದೆ ಚುನಾವಣೆ ಬಹಿಷ್ಕಾರ ಮಾಡಬಾರದಾಗಿ ಜನತೆಯಲ್ಲಿ ವಿನಂತಿಸಿದ್ದರು. ಅದೇ ರೀತಿ ಗುಡ್ಡೆಬೆಟ್ಟು ಭಾಗಕ್ಕೆ ಒಟ್ಟು 25 ಲಕ್ಷ ವೆಚ್ಚದ ೩ ಕಿಮಿ ಉದ್ದದ ಕಾಂಕ್ರೀಟ್ ರಸ್ತೆ ಇಂದು ಲೋಕಾರ್ಪಣೆಗೊಂಡಿದೆ.
2017-18 ರ ವರ್ಷದಲ್ಲಿ ವಿನಯ ಕುಮಾರ ಸೊರಕೆ , ಕಾಪು ಕ್ಷೇತ್ರದ ಶಾಸಕರಾಗಿದ್ದ ಅವಧಿಯ ಕೊನೆಯಲ್ಲಿ ಹಲವಾರು ರಸ್ತೆ ಕಾಮಗಾರಿ ಯೋಜನೆಗೆ ಹಣವನ್ನು ಮೀಸಲಿಸಿದ್ದರು. ಅದರಲ್ಲಿ ಗುಡ್ಡೇಬೆಟ್ಟು, ಎಸ್ಸಿ ಎಸ್ಟಿ ಕಾಲನಿ ಕೂಡ ಒಂದು. 2018 ರಲ್ಲಿ ಲಾಲಾಜಿ ಮೆಂಡನ್ ಅವರು ಬಿಜೆಪಿಯಿಂದ ಗೆದ್ದು ಬಂದಿದ್ದರು. ಕ್ರಮೇಣ ಈ ರಸ್ತೆ ಕಾಮಗಾರಿ ಯೋಜನೆ ಬದಿಗೆ ಸರಿಯಿತು.