ಮಂಗಳೂರು, ಅ. 14 (DaijiworldNews/PY): ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಬೆಳ್ಳೇರಿ ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ವಿಚಾರಣೆಯ ಸಂದರ್ಭ ಬಂಧಿತ ಆರೋಪಿ ಚಿನ್ನಾಭರಣ ದೋಚಲು ಬಂದು ಅತ್ಯಾಚಾರಗೈದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತ ಆರೋಪಿಯನ್ನು ಸಕಲೇಶಪುರದ ನಿವಾಸಿ ಪಾತೂರು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ್ ಅಶ್ರಫ್ (28) ಎಂದು ಗುರುತಿಸಲಾಗಿದೆ.
ಅಶ್ರಫ್ ಪಾತೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದು, ನಗದು ಹಾಗೂ ಚಿನ್ನಾಭರಣ ದೋಚುವ ಉದ್ದೇಶದಿಂದ ಬೆಳ್ಳೇರಿಯ ಕುಸುಮಾ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆಂದು ಕೈಹಾಕುವ ಸಂದರ್ಭ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬಳಿಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಮಹಿಳೆ ತಡೆದಿದ್ದು, ಆತ ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಈ ವೇಳೆ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಕುಸುಮಾ ಅವರ ನಿವಾಸದ ಎದುರು ವಾಸಿಸುವ ಗಿರೀಶ್ ಅವರ ತೋಟದ ಕೆಲಸಕ್ಕೆಂದು ಅಶ್ರಫ್ ಬಂದಿದ್ದನು. ಆ ಸಮಯದಲ್ಲಿ, ಕುಸುಮಾ ತನ್ನ ಮನೆಯಲ್ಲಿ ಏಕಾಂಗಿಯಾಗಿ ಇರುವುದನ್ನು ಅವನು ಗಮನಿಸಿದ್ದನು. ಆದ್ದರಿಂದ ಆಕೆಯ ಆಭರಣಗಳು ಮತ್ತು ಹಣವನ್ನು ದೋಚಲು ಅವನು ಯೋಜಿಸಿದ್ದನು ಎಂದು ಎನ್ನಲಾಗುತ್ತಿದೆ.
ಅಶ್ರಫ್ ಈ ಹಿಂದೆ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಂತರ ಆತ ಆಟೋವನ್ನು ಮಾರಾಟ ಮಾಡಿದ್ದು, ಕೂಲಿ ಕೆಲಸ ಮಾಡುತ್ತಿದ್ದನು. ಅಕ್ಟೋಬರ್ 14ರ ಬುಧವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.