ಮಂಗಳೂರು, ಅ. 14 (DaijiworldNews/PY): ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದ ಹಿನ್ನೆಲೆ ಕರಾವಳಿಯಲ್ಲಿ ಬಿರುಸುಗೊಂಡಿರುವ ಮಳೆ ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅ.13ರ ಮಂಗಳವಾರದಂದು ಬಿಡುವಿಲ್ಲದೆ ಮಳೆ ಸುರಿದಿದೆ.








ಪಶ್ಚಿಮ ಘಟ್ಟ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ. ಇನ್ನು ನಗರ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ. ಕರಾವಳಿಯಲ್ಲಿ ನದಿಗಳ ಹರಿವು ಹೆಚ್ಚಾಗಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಇದರಿಂದ ಮಂಗಳವಾರದವರೆಗ ವಿದ್ಯುತ್ ಕಡಿತಗೊಂಡಿತ್ತು. ಪುತ್ತೂರಿನ ಮನೆಯೊಂದರಲ್ಲಿ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಉಡುಪಿ ಹಾಗೂ ಮಂಗಳೂರಿನ ಕೆಲವು ಭಾಗಗಳಲ್ಲಿ ಮಂಗಳವಾರ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು.
ಮುಲ್ಕಿ, ತಾಳಿಪಾಡಿ ಹಾಗೂ ಕಲ್ಲಮುಂಡ್ಕೂರ್ನಂತಹ ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಬೆಳೆಗಳು ನಾಶವಾಗಿವೆ. ಆದರೆ, ಬೆಳೆಗಳಿಗೆ ಹೆಚ್ಚೇನು ಹಾನಿಯಾಗಿಲ್ಲ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಹೇಳಿದ್ದಾರೆ. ಕೊಯ್ಲಿಗೆ ಸಿದ್ದವಾಗಿರುವ ಭತ್ತದ ಬೆಳೆ ಹಾಗೂ ಹೊಲದಲ್ಲಿ ಒಣಗಲು ಬಿಟ್ಟ ಬೆಳೆಗಳಿಗೆ ಹಾನಿಯಾಗಿದೆ.
ಮಂಗಳವಾರ ಮುಂಜಾನೆಯಿಂದ ಸಂಜೆಯವರೆಗೆ ಪುತ್ತೂರಿನ ಬೆಳಂದೂರಿನಲ್ಲಿ 82.5 ಸೆಂ.ಮೀ, ಕಾಣಿಯೂರಿನಲ್ಲಿ 78 ಸೆಂ.ಮೀ ಹಾಗೂ ಸುಳ್ಯದ ಉಬರಡ್ಕ-ಮಿತ್ತೂರಿನಲ್ಲಿ 68 ಸೆಂ.ಮೀ ಮಳೆಯಾಗಿದ್ದು, ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದೆ. ಕಾರ್ಕಳದ ಅಜೆಕಾರ್, ಕೆರ್ವಾಶೆ ಹಾಗೂ ಬೈಂದೂರಿನ ಶಿರೂರು, ಚರಾ, ಹೆಬ್ರಿ, ಕಬ್ಬಿನಾಲೆ, ಮುದ್ರಾಡಿ ಮುಂತಾಗ ಪ್ರದೇಶಗಳಲ್ಲಿ 115 ಸೆಂ.ಮೀ ಗಿಂತ ಅಧಿಕ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಪಡೆ ತಿಳಿಸಿದೆ.
ಬಂಟ್ವಾಳದಲ್ಲಿ 16.4 ಸೆಂ.ಮೀ ಮಳೆಯಾದರೆ, ಬೆಳ್ತಂಗಡಿ ಹಾಗೂ ಮಂಗಳೂರಿನಲ್ಲಿ ಕ್ರಮವಾಗಿ 28.2 ಸೆಂ ಮತ್ತು 19.5 ಸೆಂ.ಮೀ ಮಳೆಯಾಗಿದೆ. ಬುಧವಾರದವರಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದಲ್ಲಿ ಗಾಳಿಯ ವೇಗವು ಹೆಚ್ಚಾಗಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಮಂಗಳವಾರ ಸಮುದ್ರದಲ್ಲಿ ಗಾಳಿಯ ರಭಸದಿಂದಾಗಿ ದೊಡ್ಡ ಅಲೆಗಳು ದಡದಲ್ಲಿ ಅಪ್ಪಳಿಸುತ್ತಿರುವುದು ಕಂಡುಬಂದಿದೆ.