ಕಾಸರಗೋಡು, ಅ. 14 (DaijiworldNews/PY): ಕೊರೊನಾ ಸಂಬಂಧಿತ ನಿರ್ಬಂಧದ ಸಮಯದಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು ಹಾಗೂ ಕಾಸರಗೋಡು ನಡುವಿನ ಬಸ್ ಸೇವೆಗಳು ಮತ್ತೆ ಕಾರ್ಯಾಚರಣೆ ಆರಂಭಿಸಿಲ್ಲ. ಬೆಳಗ್ಗೆ ಮತ್ತು ಸಂಜೆ ಕನಿಷ್ಠ 40 ಮಂದಿ ಪ್ರಯಾಣಿಕರಿದ್ದರೆ ಮಂಗಳೂರಿಗೆ ಬಸ್ಗಳನ್ನು ಓಡಿಸಲು ಸಿದ್ದ ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರು ಇಲ್ಲಿನ ಕೆಎಸ್ಆರ್ಟಿಸಿ ಡಿಪೋ ಕಚೇರಿಗೆ ಭೇಟಿ ನೀಡಿ ಅವರ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಆದರೆ, ಈಗಿನಂತೆ ಮೂವರು ಮಾತ್ರ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹೆಚ್ಚಿನ ಪ್ರಯಾಣಿಕರಿದ್ದರೆ ಮಾತ್ರ ಪುನರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಮಂಗಳೂರು-ಕಾಸರಗೋಡು ಮಾರ್ಗವಾಗಿ ಸುಮಾರು 45 ಬಸ್ಗಳು ಕಾರ್ಯನಿರ್ವಹಿಸುತ್ತಿದ್ದವು.
ಕೆಎಸ್ಆರ್ಟಿಸಿಯ ಕಾಸರಗೋಡು ಡಿಪೋದಲ್ಲಿ 101 ಬಸ್ಗಳಿದ್ದು, ಈ ಪೈಕಿ 45 ಬಸ್ಗನ್ನು ಹೆಚ್ಚಾಗಿ ತಲಪಾಡಿ ಮಾರ್ಗವಾಗಿ ಓಡಿಸಲಾಗುತ್ತಿದೆ. ಅಲ್ಲದೇ, ಕಾಞಂಗಾಡ್, ಕಣ್ಣೂರು, ಬಂಡಡ್ಕಾ, ಪೆರಾ, ಪಂಜಿಕಲ್ಲು ಹಾಗೂ ಇತರ ಮಾರ್ಗವಾಗಿ ಓಡಿಸಲಾಗುತ್ತಿತ್ತು. ಕೊರೊನಾಕ್ಕಿಂತ ಮೊದಲು 13 ಲಕ್ಷ ರೂ.ಗಳ ಸಂಗ್ರಹಿಸುತ್ತಿದ್ದ ಕೆಎಸ್ಆರ್ಟಿಸಿ ಸಂಗ್ರಹವು ದಿನಕ್ಕೆ ಸುಮಾರು ಎರಡು ಲಕ್ಷ ರೂ.ಗೆ ಕುಸಿದಿದೆ. ಇದೀಗ ಸಂಗ್ರಹವು ದಿನಕ್ಕೆ ಐದು ಲಕ್ಷ ರೂ.ಗೆ ಏರಿಕೆಯಾಗಿದೆ.