ಮಂಗಳೂರು, ಅ. 14 (DaijiworldNews/PY): ಕರ್ನಾಟಕ ಬ್ಯಾಂಕ್ನ ಹೆಚ್ಚುವರಿ ನಿರ್ದೇಶಕರಾಗಿ ಆರ್ಬಿಐನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ಎಂ.ಎಸ್ ಉಮಾ ಶಂಕರ್ ಅವರನ್ನು ನೇಮಕ ಮಾಡಲಾಗಿದೆ.

ಉಮಾ ಶಂಕರ್ ಅವರು 2020ರ ನವೆಂಬರ್ 1ರಿಂದ ಹುದ್ದೆಗೆ ಸೇರ್ಪಡೆಗೊಳ್ಳಲಿದ್ದಾರೆ. ಆರ್ಬಿಐನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ಎಂ.ಎಸ್.ಉಮಾ ಶಂಕರ್ ಅವರು ಆರ್ಬಿಐನಲ್ಲಿ 37 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಇವರು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದು, ಬಳಿಕ ನೇರ ನೇಮಕಾತಿ ಅಧಿಕಾರಿಯಾಗಿ ಆರ್ಬಿಐಗೆ ಸೇರ್ಪಡೆಯಾದರು. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ (ಸಿಎಐಐಬಿ) ಯ ಸರ್ಟಿಫೈಡ್ ಅಸೋಸಿಯೇಟ್ ಆಗಿದ್ದಾರೆ. ನ್ಯೂಯಾರ್ಕ್ನ ಕೊಲಂಬಿಯಾ ಬ್ಯುಸಿನೆಸ್ ಶಾಲೆಯಲ್ಲಿ ಕಾರ್ಯನಿರ್ವಾಹಕ ಶಿಕ್ಷಣ ಪಡೆದಿದ್ದಾರೆ. ಅಲ್ಲದೇ, ಕೆಲವು ಸಾರ್ವಜನಿಕ ವಲಯದ ಬ್ಯಾಂಕ್ನ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಎಂ.ಎಸ್. ಮಹಾಬಲೇಶ್ವರ ಅವರು ಮಾತನಾಡಿ, ಉಮಾ ಶಂಕರ್ ಅವರನ್ನು ನಮ್ಮ ಮಂಡಳಿಗೆ ಸ್ವಾಗತಿಸುತ್ತೇವೆ. ಉಮಾ ಶಂಕರ್ ಅವರೊಂದಿಗೆ ಹನ್ನೊಂದು ನಿರ್ದೇಶಕರಲ್ಲಿ ಎಂಟು ಮಂದಿ ಸ್ವತಂತ್ರ ನಿರ್ದೇಶಕರು ಹಾಗೂ ಬ್ಯಾಂಕ್ನ ಮಂಡಳಿಯಲ್ಲಿ ಇಬ್ಬರು ಮಹಿಳಾ ನಿರ್ದೇಶಕರು ಇರುತ್ತಾರೆ ಎಂದು ತಿಳಿಸಿದ್ದಾರೆ.