ಮಂಗಳೂರು, ಅ. 14 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್ ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೀಟರ್ ರೀಡರ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಟರ್ ರೀಡರ್ಗಳ ಕಾರ್ಮಿಕ ಸಂಘಟನೆ ಹಾಗೂ ಇಂಟಕ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಬಿಜೈ ಮೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಯಿತು.

ಮೆಸ್ಕಾಂ ಮೀಟರ್ ರೀಡರ್ಗಳಾಗಿ ಕಳೆದ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಬಂಟ್ವಾಳ ಮತ್ತು ಪುತ್ತೂರಿನ ಎರಡು ನೂತನ ಗುತ್ತಿಗೆದಾರ ಸಂಸ್ಥೆಗಳು ಈ ಹಿಂದಿನ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ಮೆಸ್ಕಾಂ ಮೀಟರ್ ರೀಡರ್ ಗಳು ಪ್ರತಿಭಟನೆ ನಡೆಸಿದ್ದು, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ನೂತನ ಗುತ್ತಿಗೆ ಸಂಸ್ಥೆಗಳ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯಿಂದ ದೊರೆಯಬೇಕಾದ ಸೌಲಭ್ಯ ಗಳು ದೊರೆಯುತಿಲ್ಲ ಎಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿ ಕೊಂಡರು. ಅರ್ಜಿ ಸ್ವೀಕಾರ ಮಾಡಿದ ಮೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.