ಸುಳ್ಯ, ಅ. 15 (DaijiworldNews/MB) : ಕಳೆದ ಆಗಸ್ಟ್ನಲ್ಲಿ ಸುರಿದ ಧಾರಾಕಾರ ಮಳೆಗೆ ಸುಳ್ಯ ಗಾಮ ಪಂಚಾಯಿತಿಯ ಕಲ್ಲಮುಟ್ಲುವಿನಲ್ಲಿ ಭೂಕುಸಿತಗೊಂಡು ಮನೆ ಕಳೆದುಕೊಂಡ ಕುಟುಂಬಕ್ಕೆ ಎರಡು ತಿಂಗಳು ಕಳೆದರು ಕೂಡಾ ಯಾವುದೇ ಪರಿಹಾರ ಸಿಗದೆ ಕುಟುಂಬ ಅತಂತ್ರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.


ಕಲ್ಲಮುಟ್ಲು ಜಯರಾಮ್ ನಾಯರ್ ಎಂಬುವವರ ಕುಟುಂಬ ಅತಂತ್ರ ಸ್ಥಿತಿಗೆ ಒಳಗಾಗಿದೆ. ಈ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ ಐವರು ವಾಸವಾಗಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಸುಳ್ಯದ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಈ ಜಾಗ ವಾಸಕ್ಕೆ ಯೋಗ್ಯವಲ್ಲದ ಕಾರಣ ಬೇರೆ ಕಡೆ ಜಾಗವನ್ನು ಗುರುತಿಸಿಕೊಡುವ ಭರವಸೆಯನ್ನು ನೀಡಿದ್ದರು. ಆದರೆ ಈ ಭರವಸೆಯೂ ಈಗ ಕೇವಲ ಭರವಸೆಯಾಗೇ ಉಳಿದು ಕೊಂಡಿದ್ದು ಇನ್ನು ಕೂಡಾ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ.
ಮನೆ ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಉಳಿದು ಕೊಳ್ಳಲು ತಾತ್ಕಾಲಿಕವಾಗಿ ಅಂಬೇಡ್ಕರ್ ಭವನವನ್ನು ಒದಗಿಸಲಾಗಿದೆ. ಅದನ್ನು ಹೊರತಾಗಿ ನಿರಾಶ್ರಿತರಿಗೆ ಒದಗಿಸಬೇಕಾದ ಯಾವುದೇ ಸವಲತ್ತನ್ನು ಒದಗಿಸಿಲ್ಲ ಎಂದು ತಿಳಿದು ಬಂದಿದೆ.
ಜಯರಾಮ್ ಅವರು ಕೂಲಿ ಕಾರ್ಮಿಕರಾಗಿದ್ದು ಕುಟುಂಬ ನಿರ್ವಹಣೆ ಮಾಡಲು ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ನಗರ ಪಂಚಾಯತ್ ಅನುಮತಿ ಪಡೆದು ಕುಟುಂಬವು ಈಗ ಸುಳ್ಯದ ಅಂಬೇಡ್ಕರ್ ಭವನದಲ್ಲಿ ವಾಸಿಸುತ್ತಿದ್ದು ಆದರೆ ಪಾನಮತ್ತರಾಗಿ ರಾತ್ರೋರಾತ್ರಿ ಬಂದ ನಗರ ಪಂಚಾಯಿತಿಯ ಸಿಬ್ಬಂದಿಯೊಬ್ಬರು ಅಲ್ಲಿಂದಲ್ಲೂ ತೆರಳುವಂತೆ ಒತ್ತಾಯ ಮಾಡಿ ದಾಂಧಲೆ ನಡೆಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಯರಾಮ್ ಅವರು ಸುಳ್ಯದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಗೆ ದೂರು ನೀಡಿದ್ದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯು ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ. ಯವರಿಗೆ ಪತ್ರ ಬರೆದು ನಿರಾಶ್ರಿತ ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ ಪಾನಮತ್ತರಾಗಿ ಬಂದು ದಾಂಧಲೆ ನಡೆಸಿದ ನಗರ ಪಂಚಾಯತ್ ಸಿಬ್ಬಂದಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಜಯರಾಮ್ ಅವರು, ರಾತ್ರಿ ಒಂಬತ್ತು ಗಂಟೆಗೆ ನಾನು ಇಲ್ಲದ ಸಂದರ್ಭದಲ್ಲಿ ಮದ್ಯ ಸೇವಿಸಿ ಬಂದ ನಗರ ಪಂಚಾಯಿತಿಯ ಸಿಬ್ಬಂದಿಯೊಬ್ಬರು ಬಂದು ಇಲ್ಲಿಂದ ಹೋಗುವಂತೆ ಹೇಳಿದ್ದಾರೆ. ನೀವು ಇಲ್ಲಿಂದ ಹೋಗಿ ಅಲ್ಲಿ ಬಿದ್ದುಕೊಳ್ಳಿ ಎಂದೆಲ್ಲಾ ಹೇಳಿದ್ದಾರೆ. ಈವರೆಗೂ ಪರಿಹಾರ ಒದಗಿಸಿಲ್ಲ ಅಷ್ಟೇ ಅಲ್ಲದೇ ಯಾವುದೇ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ತಹಶೀಲ್ದಾರರು ಭರವಸೆ ನೀಡಿದ್ದಾರೆ. ಆದರೆ ಈಗ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ನಾವು ಈ ಬಗ್ಗೆ ಪ್ರಶ್ನಿಸಿದರೆ ನಮಗೆ ಬೈಯ್ಯುತ್ತಾರೆ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಮುಖಂಡರು, ಇಬ್ಬರು ಮಕ್ಕಳು ಸೇರಿ ಐವರು ಇರುವ ಈ ಕುಟುಂಬಕ್ಕೆ ಈವರೆಗೂ ಯಾವುದೇ ಸವಲತ್ತು ದೊರೆತಿಲ್ಲ. ಈ ಬಗ್ಗೆ ನಾವು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ನಗರ ಪಂಚಾಯತ್ ಸಿಬ್ಬಂದಿ ಸುದೇವ್ ಎಂಬವರು, ರಾತ್ರಿ ಮದ್ಯಪಾನ ಮಾಡಿಕೊಂಡು ಗಂಡ ಇಲ್ಲದ ಸಮಯದಲ್ಲಿ ಬಂದು ಇಲ್ಲಿಂದ ಎಲ್ಲಾ ವಸ್ತುಗಳನ್ನು ತೆರವು ಮಾಡುವಂತೆ ದಾಂಧಲೆ ನಡೆಸಿದ್ದಾರೆ. ಅವರನ್ನು ಕೂಡಲೇ ನಗರ ಪಂಚಾಯತ್ನಿಂದ ವಜಾಗೊಳಿಸಿ, ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು. ತಹಶೀಲ್ದಾರರು ಈ ಕುಟುಂಬಕ್ಕೆ ವಾಸಿಸಲು ಮನೆಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.