ಮಣಿಪಾಲ, ಅ. 15 (DaijiworldNews/PY): ವ್ಯಕ್ತಿಯೋರ್ವ ನಿಷೇಧಿತ ಮಾದಕ ವಸ್ತುಗಳನ್ನು ಬ್ರಹ್ಮಾವರದಿಂದ ಮಣಿಪಾಲಕ್ಕೆ ಮಾರಾಟ ಮಾಡಲು ಬಂದಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.


ಮಹಮ್ಮದ್ ಫಜಲ್ ಬಂಧಿತ ಆರೋಪಿ.
ಅ.14ರ ಬುಧವಾರದಂದು 4.20ರ ಸುಮಾರಿಗೆ ಮಣಿಪಾಲ ಪೊಲೀಸ್ ಠಾಣಾ ಪಿ.ಐ ಮಂಜುನಾಥ ಎಮ್ ಅವರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಮಾಹಿತಿ ನೀಡಿದ್ದು, ಮಣಿಪಾಲದ ಆರ್.ಟಿ.ಒ ಕಚೇರಿ ರಸ್ತೆಯ ಎಂಡ್ಪಾಯಿಂಟ್ ಬಳಿ ಬ್ರಹ್ಮಾವರದ ಫಜಲ್ ಎಂಬವನು ನಿಷೇದಿತ ಮಾದಕ ವಸ್ತುಗಳನ್ನು ಬ್ರಹ್ಮಾವರದಿಂದ ಮಣಿಪಾಲಕ್ಕೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ. ಈ ಮಾಹಿತಿಯನ್ನು ಮಂಜುನಾಥ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಡುಪಿ ಹಾಗೂ ಡಿ.ವೈ.ಎಸ್ಪಿ, ಉಡುಪಿ ಹಾಗೂ ಠಾಣೆಯಲ್ಲಿದ್ದ ಎ.ಎಸ್.ಪಿ, ಕುಂದಾಪುರರವರಿಗೆ ತಿಳಿಸಿದ್ದು, ಮೇಲಾಧಿಕಾರಿಯವರ ಆದೇಶದಂತೆ 5 ಗಂಟೆಯ ಸುಮಾರಿಗೆ ಎಎಸ್ಪಿ, ಕುಂದಾಪುರ, ಗಜೆಟೆಡ್ ಅಧಿಕಾರಿ ನಾಗರಾಜ್, ಹಾಗೂ ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.
ಈ ವೇಳೆ ಪೊಲೀಸರು ಆ ವ್ಯಕ್ತಿಯ ಚಲನವಲವನ್ನು ಖಚಿತಪಡಿಸಿಕೊಂಡಿದ್ದು, ಆತನನ್ನು ಹಿಡಿದು ವಿಚಾರಿಸಿದ್ದಾರೆ. ಈ ವೇಳೆ ಆತ ತನ್ನ ಹೆಸರು ಮಹಮ್ಮದ್ ಫಜಲ್ ಎಂದು ತಿಳಿಸಿದ್ದಾನೆ. ತಾನು ಹಾಗೂ ತನ್ನ ಸ್ನೇಹಿತರಾದ ಉಡುಪಿಯ ಫರ್ಹಾನ್ ಮತ್ತು ಸಫಾ ಮೂವರು ಸೇರಿ ಕೆಲವು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ಶುಗರ್ ಅನ್ನು ಆನ್ಲೈನ್ನಲ್ಲಿ ಆರ್ಡರ್ ನೀಡಿ ತನ್ನ ವಿಳಾಸಕ್ಕೆ ತರಿಸಿದ್ದು, ಅವುಗಳನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿ, ತಾನು ಫರಾನ್ ಹಾಗೂ ಸಫಾಳಿಗೆ ಇಲ್ಲಿ ನಿಂತು ಕಾಯುತ್ತಿರುವುದಾಗಿ ತಿಳಿಸಿದ್ದಾನೆ.
ಆರೋಪಿಯ ಬಳಿಯಿದ್ದ 2 ಮೊಬೈಲ್ಪೋನ್ಗಳು, ಅಂದಾಜು 4,63,600 ರೂ.ಮೌಲ್ಯದ 54 ನಿಷೇದಿತ ಎಂಡಿಎಂಎ ಎಕ್ಸ್ಟಾಸೆ ಮಾತ್ರೆಗಳು, 30 ಗ್ರಾಂ ಬ್ರೌನ್ಶುಗರ್, ಚುನಾವಣಾ ಗುರುತು ಚೀಟಿ, 2 ಡೆಬಿಟ್ ಕಾರ್ಡ್ ಹಾಗೂ ಇಂಟಿಮೇಶನ್ಸ್ಲಿಪ್ನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.