ಮಂಗಳೂರು, ಅ. 15 (DaijiworldNews/PY): ಜಿಲ್ಲೆಯಲ್ಲಿ ಅ.14ರ ಬುಧವಾರವಾರದಂದು ಧಾರಾಕಾರ ಮಳೆಯಾಗಿದ್ದು ಅನೇಕ ಸ್ಥಳಗಳಲ್ಲಿ ಕೃತಕ ಪ್ರವಾಹ ಉಂಟಾಗಿ ಆಸ್ತಿ-ಪಾಸ್ತಿ ಹಾನಿಯಾಗಿದೆ.

ನಗರದಲ್ಲಿ ಮಂಗಳವಾರ ತಡರಾತ್ರಿ ಸುರಿಯಲು ಆರಂಭಿಸಿದ ಮಳೆ ಬುಧವಾರವೂ ಮುಂದುರೆದಿದ್ದು, ಅನೇಕ ಸ್ಥಳಗಳಲ್ಲಿ ನೀರು ನುಗ್ಗಿದೆ. ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಮಾಲೆಮಾರ್, ಉರ್ವಾಸ್ಟೋರ್, ಕನ್ನಗುಡ್ಡ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಕೃತಕ ನೆರೆ ಸೃಷ್ಠಿಯಾಗಿತ್ತು. ಕೆ.ಎಸ್.ರಾವ್ ರಸ್ತೆಯಲ್ಲಿನ ಅಪಾರ್ಟ್ಮೆಂಟ್ನ ಕಾಂಪೌಂಡ್ ಗೋಡೆ ಕುಸಿದಿದೆ.
ಕೆದಿಲ ಗ್ರಾಮದ ಅಡಿಕೆ ತೋಟಕ್ಕೆ ಹಾಗೂ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಉಜಿರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಇನ್ನು ಕಾಯರ್ತಡ್ಕದ ಬಳಿ ತೋಡಿನಲ್ಲಿ ನೀರು ಉಕ್ಕಿ ಹರಿದು ಕೃಷಿ ಭೂಮಿಗೆ ನೀರು ನುಗ್ಗಿದೆ.
ಪುಟ್ಟೂರು, ವೇಣೂರು, ಧರ್ಮಸ್ಥಳ, ಕಡಬ, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಸುರತ್ಕಲ್ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಭಾರೀ ಮಳೆಯ ಹಿನ್ನೆಲೆ, ಹವಾಮಾನ ಇಲಾಖೆ ಘೋಷಿಸಿದ ಆರೆಂಜ್ ಅಲರ್ಟ್ ಅ.16ರವರೆಗೆ ಮುಂದುವರೆದಿದೆ.