ಬೆಂಗಳೂರು, ಮೇ 20: ರಾಜ್ಯಪಾಲ ವಜುಬಾಯ್ ವಾಲಾ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಅನುಮೋದನೆ ನೀಡಿ, ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಿದ್ದರೂ ಕೂಡಾ ಮೇ 24 ರ ಗುರುವಾರ ಸದನದಲ್ಲಿ ಸ್ಪೀಕರ್ ಆಯ್ಕೆ ನಡೆದ ಬಳಿಕ ವಿಶ್ವಾಸಮತವನ್ನೂ ಸಾಬೀತು ಪಡಿಸುವುದಾಗಿ ಅವರು ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು , ಬುಧವಾರ ನಡೆಯುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು, ನಾಳೆ ( ಸೋಮವಾರ ) ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ. ಬಳಿಕ ಗುರುವಾರ ವಿಶ್ವಾಸಮತವನ್ನೂ ಸಾಬೀತು ಪಡಿಸುವುದಾಗಿ ಹೇಳಿದರು.
ಇದಕ್ಕೂ ಮುಂಚೆ ವಾಡಿಕೆಯಂತೆ ತಮಿಳುನಾಡಿನ ತಿರುಚ್ಚಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಂಗಂ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ನಡುವೆ ನಿಯೋಜಿತ ಸಿಎಂ ಎಚ್ಡಿಕೆ ಅವರ ನಿವಾಸಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ, ಪೊಲೀಸ್ ಮಹಾ ನೀರ್ದೇಶಕಿ ನೀಲಮಣಿ ಎನ್.ರಾಜು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಭೇಟಿ ನೀಡಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.