ಮಂಗಳೂರು, ಅ. 15 (DaijiworldNews/PY): ಕಳೆದ ವರ್ಷ ಪಚ್ಚನಾಡಿ ಘನತ್ಯಾಜ್ಯ ಘಟಕದಿಂದ ಉಂಟಾಗಿರುವ ಅನಾಹುತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡಲು ಅಗತ್ಯವಾದ ಮೊತ್ತ ಕ್ರೋಢೀಕರಿಸಲು ಪಾಲಿಕೆಯ ಸ್ಥಿರಾಸ್ತಿಯನ್ನು ಅಡವಿಟ್ಟು ಹಾಗೂ ಬ್ಯಾಂಕ್ನಿಂದ ಸಾಲ ಪಡೆದುಕೊಳ್ಳಲು ಪಾಲಿಕೆಗೆ ಅನುಮತಿ ಕಲ್ಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲು ಯಾವುದೇ ದೃಢವಾದ ಯೋಜನೆಯನ್ನು ರೂಪಿಸುವಲ್ಲಿ ನಿಗಮ ವಿಫಲವಾಗಿದೆ.

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದು, ಅಕ್ಟೋಬರ್ 14 ರ ಬುಧವಾರ ಹೈಕೋರ್ಟ್ನ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲು ಹಣದ ಕೊರತೆ ಇದೆ. ಹಾಗೂ ಪರಿಹಾರಕ್ಕಾಗಿ 14 ಕೋಟಿ ರೂ.ಗಳನ್ನು ಸರ್ಕಾರವು ಈವರೆಗೆ ಬಿಡುಗಡೆ ಮಾಡಿಲ್ಲ ಎಂದು ಪಾಲಿಕೆಯ ಪರ ವಕೀಲರು ನ್ಯಾಯಪೀಠದ ಮುಂದೆ ವಿವರಿಸಿದರು.
ಪಾಲಿಕೆಯ ಕಟ್ಟಡ ಅಥವಾ ಸ್ಥಿರಾಸ್ತಿಯನ್ನು ಅಡವಿಟ್ಟು ಪರಿಹಾರವನ್ನು ನೀಡುವಂತೆ ನ್ಯಾಯಪೀಠ ಆರಂಭದಲ್ಲಿ ಮೌಖಿಕವಾಗಿ ಪಾಲಿಕೆಗೆ ಹೇಳಿತು.
ಸಂತ್ರಸ್ತರಲ್ಲಿ ಕೇವಲ 35 ಮಂದಿಗೆ ಈವರೆಗೆ ಬೆಳೆ ನಷ್ಟ ಪರಿಹಾರವನ್ನು ಮಾತ್ರ ವಿತರಿಸಲಾಗಿದೆ. ಮನೆಹಾನಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಘನ ತ್ಯಾಜ್ಯ ನಿರ್ವಹಣಾ ನಿಯಮಗಳು - 2016 ರ ಅನುಷ್ಠಾನವನ್ನು ಪಾಲಿಕೆ ನಿರ್ಲಕ್ಷಿಸಿದೆ. ಈ ವಿಚಾರವಾಗಿ ಪಾಲಕೆಯ ಆಯುಕ್ತರು ಪ್ರಮಾಣಪತ್ರ ಸಲ್ಲಿಸಬೇಕು ಹಾಗೂ ಮುಂದಿನ ವಿಚಾರಣೆಯ ಸಂದರ್ಭ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರಲು ಕಾರಣಗಳನ್ನು ನೀಡಿ ಒಂದು ವಾರದೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಗೆ ಸೂಚಿಸಿದೆ.
ಒಂದು ಕಡೆ ಪಾಲಿಕೆ ತನ್ನ ಬಳಿ ಹಣವಿಲ್ಲ ಎಂದು ಹೇಳುತ್ತಿದ್ದು, ಇನ್ನೊಂದೆಡೆ ಸರ್ಕಾರಕ್ಕೆ 14 ಕೋ.ರೂ.ಹಣವನ್ನು ಬಿಡುಗಡೆ ಮಾಡುವ ಇಚ್ಚೆಯನ್ನು ಹೊಂದಿರುವಂತೆ ಕಾಣಿಸುತ್ತಿಲ್ಲ. ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಸ್ಥಿರಾಸ್ತಿಯನ್ನು ಅಡವಿಟ್ಟು ಬ್ಯಾಂಕ್ನಿಂದ ಸಾಲ ಪಡೆಯಲು ಪಾಲಿಕೆಗೆ ಒಂದು ವಾರ ನೀಡುವಂತೆ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ. 22 ಕೋಟಿ ರೂ.ಗಳಲ್ಲಿ ಎಂಟು ಕೋಟಿ ರೂಗಳನ್ನು ಮಾತ್ರ ಏಕೆ ಬಿಡುಗಡೆ ಮಾಡಿದ್ದು? ಬಾಕಿ ಹಣವನ್ನು ಏಕೆ ಬಿಡುಗಡೆ ಮಾಡಿಲ್ಲ ಎನ್ನುವ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ತಿಳಿಸಿದೆ.