ಕುಂದಾಪುರ, ಮೇ 20 : ರಾತ್ರಿ ಸುರಿದ ಭಾರೀ ಸಿಡಿಲು ಸಹಿತ ಗಾಳಿ ಮಳೆಗೆ ಕುಂದಾಪುರ ಪರಿಸರದಲ್ಲಿ ಅಪಾರ ಹಾನಿ ಸಂಭವಿಸಿದೆ. ಬಳ್ಕೂರು ಉತ್ತರಶಾಲೆ ನಿವಾಸಿ ಸೋಮ ಪೂಜಾರಿ ಎಂಬವರ ಮನೆಗೆ ರಾತ್ರಿ ಸಿಡಿಲು ಬಡಿದಿದೆ. ಹೀಗಾಗಿ ಮನೆಯ ಟಿವಿ, ಫ್ಯಾನ್ ಸಹಿತ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯುಂಟಾಗಿದೆ.
ಮನೆಯ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಸುಮಾರು 1 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಇನ್ನು ಬೈಲುಮನೆ ನಿವಾಸಿ ಯಶೋಧ ಎಂಬವರ ಮನೆಗೆ ಹಲಸಿನ ಮರವೊಂದು ಉರುಳಿ ಬಿದ್ದಿದೆ. ಇದರಿಂದಾಗಿ ಮನೆಯ ಒಂದು ಪಾಶ್ವ ಜಖಂಗೊಂಡಿದೆ. ಘಟನೆಯಿಂದಾಗಿ ಸುಮಾರು 10 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕುಂದಾಪುರದ ಬಿಸಿ ರಸ್ತೆಯ ಬೈಲಚಿಕ್ಕು ದೇವಸ್ಥಾನದ ಬಳಿ ಇರುವ ಮಾಧವ ಗಾಣಿಗ ಎಂಬವರ ಮನೆಗೂ ಹಾನಿಯಾಗಿದೆ. ಸಿಡಿಲು ಸಹಿತ ಗಾಳಿ ಮಳೆಯಿಂದಾಗಿ ಮನೆಯ ಟಿವಿ, ಮೊಬೈಲ್, ಹೋಂ ಥಿಯೇಟರ್ ಹಾಗೂ ಪೀಠೋಪಕರಣಗಳಿಗೂ ಹಾನಿಯುಂಟಾಗಿದೆ. ಸುಮಾರು 70 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಬಳ್ಕೂರು ಪಂಚಾಯತ್ ಕಾರ್ಯದರ್ಶಿ ವಿಜಯೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.