ಉಡುಪಿ, ಅ. 15 (DaijiworldNews/PY): ಉಡುಪಿ ಅಂಚೆ ವಿಭಾಗ ಹಾಗೂ ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಅ.15ರ ಗುರುವಾರದಂದು ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾರಕ ಕಾಲೇಜು ಸಭಾಂಗಣದಲ್ಲಿ ಅಂಚೆ ಕಾರ್ಡ್ ಮೂಲಕ ಶಿಕ್ಷಣ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇಲ್ಲಿಯವರೆಗೆ ಆನ್ಲೈನ್ ನಡೆಸಿದ ಪಾಠಗಳ ಬಗ್ಗೆ ಚುಟುಕು ಪ್ರಶ್ನೆಗಳನ್ನು ಅಂಚೆಕಾರ್ಡ್ನಲ್ಲಿ ಬರೆದು ಅದನ್ನು ಮಕ್ಕಳಿಗೆ ತಲುಪಿಸಿ, ನಂತರ ಮಕ್ಕಳಿಂದ ಅಂಚೆ ಕಾರ್ಡ್ನಲ್ಲಿ ಉತ್ತರ ಬರೆಸಿ ಪಡೆದುಕೊಳ್ಳುವ ಒಂದು ವಿಶಿಷ್ಟವಾದ ಪ್ರಯೋಗವನ್ನು ಕಾಲೇಜಿನಲ್ಲಿ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಮಧುಸೂದನ್ ಭಟ್ ಅವರು ಉಪಸ್ಯಾಕರ ಪ್ರಶ್ನಾವಳಿ ಕಾರ್ಡ್ಗಳನ್ನು ಅಂಚೆ ವಿಭಾಗದ ಉಪ ಅಧೀಕ್ಷಕ ಧನಂಜಯ್ ಆಚಾರ್ಯ ಅವರಿಗೆ ಹಸ್ತಾಂತರಿಸಿದರು.
ಉಡುಪಿ ಅಂಚೆ ಇಲಾಖೆಯ ಮಾರುಕಟ್ಟೆ ವಿಭಾಗದ ಪೂರ್ಣಿಮಾ ಜನಾರ್ಧನ್ ಅವರು, ಅಂಚೆ ದಿನದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಅಂಚೆ ಇಲಾಖೆಯ ಸಿಬ್ಬಂದಿ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಮಧುಸೂದನ್ ಭಟ್ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಕೋಟ್ಯಾನ್ ಸ್ವಾಗತಿಸಿದರು. ವಾಣಿಜ್ಯ ಪ್ರಾಧ್ಯಾಪಕ ಹರಿಕೇಶವ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ ಜಿ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು.