ಮಂಗಳೂರು, ಅ. 16 (DaijiworldNews/MB) : ಸುಮಾರು ಏಳು ತಿಂಗಳುಗಳ ಬಳಿಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಲ್ಟಿಪ್ಲೆಕ್ಸ್ಗಳು ಅಕ್ಟೋಬರ್ 15 ರ ಗುರುವಾರ ತೆರೆದಿದ್ದು ಸಿಂಗಲ್ ಸ್ಕ್ರೀನ್ ಚಿತ್ರ ಮಂದಿರಗಳು ಮಾತ್ರ ಮುಚ್ಚಿದ್ದವು. ಆದರೆ ಮಲ್ಟಿಪ್ಲೆಕ್ಸ್ಗಳಲ್ಲಿನ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಇಲ್ಲದೆ ಬಿಕೋ ಎನ್ನುತ್ತಿದ್ದವು.

ನಗರದ ಮೂರು ಮಲ್ಟಿಪ್ಲೆಕ್ಸ್ಗಳ ಪೈಕಿ ಬಿಗ್ ಸಿನೆಮಾಸ್ ಮತ್ತು ಸಿನೆಪಾಲಿಸಿಯಲ್ಲಿ ಬೆರಳೆಣಿಕೆಯಷ್ಟು ಪ್ರೇಕ್ಷಕರು ಇದ್ದರು. ಈ ಮಲ್ಟಿಪ್ಲೆಕ್ಸ್ಗಳಲ್ಲಿ ಕೆಲವು ಚಿತ್ರ ಮಂದಿರಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಪಿವಿಆರ್ ಇನ್ನಷ್ಟೇ ತೆರೆಯಬೇಕಾಗಿದೆ. ಮಣಿಪಾಲದ ಬಿಗ್ ಸಿನಿಮಾಸ್ನಲ್ಲಿ ಮೂರು ಪ್ರದರ್ಶನಗಳ ಬಗ್ಗೆ ನಿರ್ಧರಿಸಿದ್ದರೂ ಕೂಡಾ ಪ್ರೇಕ್ಷಕರು ಇಲ್ಲದೆ ಪ್ರದರ್ಶನಗಳನ್ನು ರದ್ದುಪಡಿಸಲಾಗಿದೆ. ಇನ್ನು ಐನಾಕ್ಸ್ ಥಿಯೇಟರ್ ತಾಂತ್ರಿಕ ಕಾರಣಗಳಿಂದಾಗಿ ತೆರೆಯಲಿಲ್ಲ.
ಒಂದೆಡೆ ಕೊರೊನಾ ಕಾರಣದಿಂದಾಗಿ ಜನರು ಚಿತ್ರ ಮಂದಿರಗಳಿಗೆ ತೆರಲಿಲ್ಲ ಎಂದು ಊಹಿಸಬಹುದಾದರೂ ಇನ್ನೊಂದೆಡೆ ಮಾರ್ಚ್ನಲ್ಲಿ ಇದ್ದಕ್ಕಿಂದ್ದಂತೆ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಮರು ಪ್ರದರ್ಶನ ಈಗ ಆಗಿರುವುದರಿಂದ ಪ್ರೇಕ್ಷಕರು ಕಡಿಮೆ ಇರುವ ಸಾಧ್ಯತೆಯಿದೆ. ಇನ್ನು ಈ ಸಿನಿಮಾಗಳನ್ನು ಜನರು ಈಗಾಗಲೇ ಟಿವಿಗಳಲ್ಲಿ ನೋಡಿದ್ದು ಮತ್ತೆ ಥಿಯೇಟರ್ನಲ್ಲಿ ಈ ಸಿನಿಮಾಗಳನ್ನು ನೋಡಲು ಒಲವು ತೋರಿಸಿಲ್ಲ ಎಂಬ ಅಭಿಪ್ರಾಯವು ಇದೆ.
ಕೆಲವರು ಕೊರೊನಾ ಸಂದರ್ಭದಲ್ಲಿ ಚಿತ್ರ ಮಂದಿರಗಳಲ್ಲಿ ಇರುವ ಹೊಸ ವ್ಯವಸ್ಥೆಗಳ ಪರಿಶೀಲನೆ ನಡೆಸಲು ಬಂದಿದ್ದರೆ, ಇನ್ನು ಕೆಲವರು ಸಮಯ ಕಳೆಯಲೆಂದು ಬಂದಂತೆ ಚಿತ್ರ ಮಂದಿರಗಳು ಇದ್ದವು ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮಲ್ಟಿಪ್ಲೆಕ್ಸ್ನ ಸಿಬ್ಬಂದಿ, ''ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡದಿದ್ದರೆ ಪ್ರೇಕ್ಷಕರ ಸಂಖ್ಯೆ ಅತೀ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಆದರೆ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಿದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿಲ್ಲ. ಕಾಲೇಜುಗಳು ತೆರೆದ ನಂತರ, ಕೆಲವು ವಿದ್ಯಾರ್ಥಿಗಳು ಬರಬಹುದು. ಸದ್ಯಕ್ಕೆ ಕುಟುಂಬದೊಂದಿಗೆ ಜನರು ಬರಬಹುದು'' ಎಂದು ಹೇಳಿದ್ದಾರೆ.
ರಾಜ್ಯದ ವಿವಿಧ ಸ್ಥಳಗಳಲ್ಲಿ ಸಿನಿಮಾ ಮಂದಿರಗಳು ತೆರೆದಿದ್ದರೂ ಕೂಡಾ ಪ್ರೇಕ್ಷಕರು ಹೆಚ್ಚು ಉತ್ಸಾಹ ತೋರಿದಂತಿಲ್ಲ. ಸಿಂಗಲ್ ಸ್ಕ್ರೀನ್ ಚಿತ್ರ ಮಂದಿರಗಳು ಕೆಲವೇ ಸ್ಥಳಗಳಲ್ಲಿ ಮಾತ್ರ ತೆರೆಯಲ್ಪಟ್ಟಿದೆ. ಕೆಲವು ಮಲ್ಟಿಪ್ಲೆಕ್ಸ್ಗಳು ಸಹ ಮುಚ್ಚಲ್ಪಟ್ಟಿದೆ. ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ಕಲಬಗುಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಚಿತ್ರಮಂದಿರಗಳು ಇನ್ನು ಕೂಡಾ ತೆರೆದಿಲ್ಲ. ಪ್ರದರ್ಶಕರು ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವವರೆಗೂ ಅವರು ಸಿನಿಮಾ ಮಂದಿರಗಳನ್ನು ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜೈರಾಜ್ ಅವರು, ''ಜನರು ಚಿತ್ರಮಂದಿರಗಳಿಗೆ ಬಂದು ಚಲನಚಿತ್ರಗಳನ್ನು ನೋಡುವ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಜನರು ಬರುವ ನಿರೀಕ್ಷೆಯಿದೆ'' ಎಂದು ಹೇಳಿದ್ದಾರೆ.