ಮಂಗಳೂರು, ಅ. 16 (DaijiworldNews/MB) : ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.17 ರಿಂದ ಆರಂಭವಾಗಲಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಕೊರೊನಾ ವಾರಿಯರ್, ಎನ್ಆರ್ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಚಾಲನೆ ನೀಡಲಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಶ್ರೀ ಜನಾರ್ದನ ಪೂಜಾರಿ ಅವರ ಆಶಯದಂತೆ ಮಂಗಳೂರು ದಸರಾ ಮಹೋತ್ಸವವು ''ನಮ್ಮ ದಸರಾ-ನಮ್ಮ ಸುರಕ್ಷೆ'' ಘೋಷವಾಕ್ಯದಡಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಕೊರೊನಾ ವಾರಿಯರ್ ಆಗಿ ಅವಿರತ ಶ್ರಮಿಸಿದ ಡಾ. ಆರತಿಕೃಷ್ಣ ಅವರನ್ನು ಮಂಗಳೂರು ದಸರಾ ಮಹೋತ್ಸದ ಚಾಲನೆಗೆ ಆಮಂತ್ರಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಅ.17ರ ಶನಿವಾರ ಬೆಳಗ್ಗೆ 9.30ಕ್ಕೆ ಗುರುಪ್ರಾರ್ಥನೆ, 11.30ಕ್ಕೆ ಕಲಶ ಪ್ರತಿಷ್ಠೆ, 12.00 ದಸರಾಕ್ಕೆ ಚಾಲನೆ, 12.30ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ, 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ಸಂಜೆ 7.00ರಿಂದ ಭಜನಾ ಕಾರ್ಯಕ್ರಮ, 9.00ರಿಂದ ದೇವಿ ಪುಷ್ಪಾಲಂಕಾರ ಪೂಜೆ ನಡೆಯಲಿದೆ.
ಡಾ.ಆರತಿ ಕೃಷ್ಣ ಅವರ ಬಗ್ಗೆ ಸಂಕ್ಷಿಪ್ತ ವಿವರ
ಡಾ. ಆರತಿಕೃಷ್ಣ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಜನಿಸಿದ್ದು ಉಡಪಿಯಲ್ಲಿ. ಇವರ ತಂದೆ ಬೇಗಾನೆ ರಾಮಯ್ಯ, ತಾಯಿ ಸೀತಾ ಬಿ. ರಾಮಯ್ಯ. ತಂದೆ ಶೃಂಗೇರಿ ಎನ್.ಆರ್. ಪುರದಲ್ಲಿ ವಕೀಲರಾಗಿದ್ದು, ಶೃಂಗೇರಿ ಶಾಸಕರಾಗಿ, ರಾಜ್ಯ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವರಾಗಿದ್ದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಅನಿವಾಸಿ ಭಾರತೀಯರು ಯಾರೇ ಸಂಕಷ್ಟಕ್ಕೀಡಾದರೂ ಕೂಡಲೇ ಸ್ಪಂದಿಸಿ ಅದಕ್ಕೆ ಪರಿಹಾರ ಒದಗಿಸಿದವರು ಡಾ. ಆರತಿ ಕೃಷ್ಣ ಅವರು. ಸುಮಾರು 6 ತಿಂಗಳಿಂದೀಚೆಗೆ 40ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಡಿಗೆ ಕರೆತರುವಲ್ಲಿ ಯಶಸ್ವಿಯಾದರು. ಎನ್ಆರ್ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಇವರು ಶ್ರಮಿಸಿದ್ದರು.
ತನ್ನ ಸೇವೆಯಲ್ಲಿ ಯಾವತ್ತೂ ಅಪೇಕ್ಷೆ - ಪ್ರಚಾರ ಬಯಸದೆ ತನ್ನ ಇಡೀ ಜೀವನವನ್ನು ಇತರರಿಗೆ ಮುಡಿಪಾಗಿಟ್ಟು ನೊಂದವರ ಪಾಲಿಗೆ ಆಸರೆಯಾಗಿ, ವಿದೇಶಾಂಗ ಸಚಿವರನ್ನೂ ನಾಚಿಸುವ ರೂಪದಲ್ಲಿ ಬಹಳ ತಾಳ್ಮೆ, ಸಹನೆಯ ಮೂಲಕ ಸ್ಪಂದಿಸುತ್ತಿರುವ ಧೀರ ವನಿತೆ.
ಜಗತ್ತಿನಾದ್ಯಂತ ಇರುವ ಹಲವಾರು ದೇಶಗಳ ರಾಯಭಾರಿಗಳ ನಿರಂತರ ಸಂಪರ್ಕದಿಂದ ಚೀನಾ, ಇಟಲಿ, ಆಸ್ಟ್ರೇಲಿಯಾ. ಅಮೇರಿಕ. ಫಿಲಿಪೈನ್ಸ್, ಸ್ಪೇನ್, ಫಿನ್ಲ್ಯಾಂಡ್, ಮಲೇಷಿಯಾ, ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್, ಪೋಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್, ಕೊಲ್ಲಿ ರಾಷ್ಟ್ರಗಳು ಮೊದಲಾದ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಹಾಗೂ ಇತರ ರಾಷ್ಟ್ರಗಳ ಪ್ರಜೆಗಳು ತಮ್ಮ ಬಳಿ ಸಹಾಯಯಾಚಿಸಿ ಬಂದವರಿಗೆ ಸೂಕ್ತ ವ್ಯವಸ್ಥೆ ಮಾಡಿ ಲಕ್ಷಾಂತರ ಜನರ ಮನ ಗೆದ್ದಿದ್ದಾರೆ.
ಆರತಿ ಕೃಷ್ಣ ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬೆಳೆದವರು. ಅಧಿಕಾರಕ್ಕಾಗಿ ಯಾವತ್ತೂ ಲಾಬಿ ಮಾಡಿದವರಲ್ಲ, ಹಿಂದೆ ಬಿದ್ದವರಲ್ಲ. ಇವರ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ, ಸಹ್ಯಾದ್ರಿ ಸಂಘದ ಗೌರವ ಪ್ರಶಸ್ತಿ, ಮಹಾತ್ಮಗಾಂಧಿ ಸಮ್ಮಾನ ಅವಾರ್ಡ್ ಬ್ಯಾಂಕಾಕ್ನಲ್ಲಿ, ದುಬೈ ಕನ್ನಡ ಕಾಯಕ ರತ್ನ , ಅಮೆರಿಕಾದ ಮೆರಿಲ್ಯಾಂಡ್ ರಾಜ್ಯದ ಗವರ್ನರ್ನಿಂದ ಇಂಡಿಯನ್ ಕಮ್ಯೂನಿಟಿ ಎಡ್ವಕೇಟ್ ಪ್ರಶಸ್ತಿ ಅರಸಿ ಬಂದಿವೆ. ಆರತಿ ಕೃಷ್ಣ ಅವರು ದೇಶ-ವಿದೇಶದಲ್ಲಿ ಸಲ್ಲಿಸಿದ ಕೊಡುಗೆಯನ್ನು ಮೆಚ್ಚಿದ ಜನ ''ಮಲೆನಾಡ ಇಂದಿರಾ'' ಬಿರುದನ್ನು ನೀಡಿದ್ದಾರೆ.