ಕುಂದಾಪುರ, ಅ. 16 (DaijiworldNews/PY): ಕೊರೊನಾ ಸಾಂಕ್ರಾಮಿಕ ಹಿನ್ನೆಲೆ, ವಿಶ್ವಪ್ರಸಿದ್ದ ಮೈಸೂರು ದಸರಾ ಸೇರಿದಂತೆ ದಸರಾ ಉತ್ಸವಗಳನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ನವರಾತ್ರಿ ಸಮಯದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಸಾಂಪ್ರದಾಯಿಕ ಹುಲಿ ನೃತ್ಯಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಕೊರೊನಾ ಮಾರ್ಗಸೂಚಿಗಳೊಂದಿಗೆ ಸೀಮಿತ ಸಂಖ್ಯೆ ಹುಲಿಗಳ ತಂಡಕ್ಕೆ ಮಾತ್ರ ಪ್ರದರ್ಶನ ನೀಡಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2,000 ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ಇದ್ದಾರೆ. ಹೊಸ ತಂಡಗಳ ಪ್ರಸ್ತಾಪವೂ ಇದೆ. ಅವರಲ್ಲಿ ಯಾರೂ ಕೂಡಾ ನಿರುದ್ಯೋಗಿಗಳಾಗಬಾರದು. ಪ್ರತಿಯೊಬ್ಬರು ಶ್ರಮಿಸಿ ಈ ಕಲೆಯನ್ನು ಉತ್ತೇಜಿಸಬೇಕು ಎನ್ನುವುದು ಸರ್ಕಾರದ ಹಾರೈಕೆ. ಅದಕ್ಕಾಗಿ ಸೂಕ್ತವಾದ ವಾತಾವರಣ ಕಲ್ಪಿಸಲಾಗುವುದು ಎಂದಿದ್ದಾರೆ.
ಯಕ್ಷಗಾನ ಕಲಾವಿದರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಪ್ರದರ್ಶನವನ್ನು ವೀಕ್ಷಿಸಲು ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಇದಲ್ಲದೆ, ರಾತ್ರಿಯಿಡೀ ನಡೆಯುವ ಪ್ರದರ್ಶನಗಳ ಕುರಿತು ಚರ್ಚೆ ನಡೆಸಬೇಕಾಗಿದೆ. ಇದಾದ ಬಳಿಕ ಕೊರೊನಾ ಮಾರ್ಗಸೂಚಿಯ ಅನ್ವಯ ಪ್ರದರ್ಶನ ನೀಡಲು ತಂಡಗಳಿಗೆ ಅವಕಾಶ ನೀಡಲಾಗುವುದು. ಆರ್ಥಿಕ ಸಂಕಷ್ಟದಿಂದಾಗಿ ನಿಧಿ ಹಾಗೂ ಯಕ್ಷಗಾನ ಕಲಾವಿದರಿಗೆ ಪಿಂಚಣಿ ನೀಡುವ ಪ್ರಸ್ತಾಪದ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.