ಮಂಗಳೂರು, ಅ. 17 (DaijiworldNews/MB) : ವೈದ್ಯಕೀಯ ಕಾಲೇಜಿನ ಪ್ರವೇಶಕ್ಕೆ ಅಖಿಲ ಭಾರತ ಮಟ್ಟದಲ್ಲಿ ನಡೆದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಆಕರ್ಷ್ ಆರ್.ಪೈ ಜನರಲ್ ಕ್ಯಾಟಗರಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 224ನೇ ಹಾಗೂ ಇಡಬ್ಲ್ಯೂಎಸ್ ಕ್ಯಾಟಗರಿಯಲ್ಲಿ 16ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಆಕರ್ಷ್ ಒಟ್ಟು 720 ಅಂಕದ ಪರೀಕ್ಷೆಯಲ್ಲಿ 691 ಅಂಕ ಪಡೆದುಕೊಂಡಿದ್ದಾರೆ.

ಈ ಕಾಲೇಜಿನ ಇನ್ನೋರ್ವ ವಿದ್ಯಾರ್ಥಿ ಆಕಾಶ್ ಜಿ. 720ರಲ್ಲಿ 687 ಅಂಕ ಪಡೆದು ಅಖಿಲ ಭಾರತ ಮಟ್ಟದಲ್ಲಿ ಜನರಲ್ ಕ್ಯಾಟಗರಿಯಲ್ಲಿ 339ನೇ ರ್ಯಾಂಕ್ ಹಾಗೂ ಯುಆರ್ ಕ್ಯಾಟಗರಿಯಲ್ಲಿ 227ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ತಡರಾತ್ರಿ ಫಲಿತಾಂಶ ಹೊರಬಂದಿದ್ದು, ಪೂರ್ಣ ಫಲಿತಾಶ ಇನ್ನಷ್ಟೇ ಲಭ್ಯವಾಗಬೇಕಿದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.