ಮಂಗಳೂರು, ಅ. 17 (DaijiworldNews/MB) : ಇಲ್ಲಿನ ನಗರ ಬಸ್ಸುಗಳು ಪ್ರಯಾಣಿಕರಿಗೆ 'ಚಲೋ ಸೂಪರ್ ಸೇವರ್ ಪ್ಲಾನ್' ಎಂದು ಕರೆಯಲ್ಪಡುವ ವಾರ ಮತ್ತು ಮಾಸಿಕ ಬಸ್ ಪಾಸ್ ಸೌಲಭ್ಯವನ್ನು ಒದಗಿಸಿದೆ. ಈ ಪಾಸ್ಗಳು ಪ್ರಯಾಣಿಕರಿಗೆ ಸುಮಾರು 3.99 ರೂ.ಗಳ ವೆಚ್ಚದಲ್ಲಿ ಪ್ರಯಾಣ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಅವರು ಘೋಷಿಸಿದ್ದಾರೆ.


ಅಕ್ಟೋಬರ್ 16 ಶುಕ್ರವಾರ ಇಲ್ಲಿನ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿಲ್ರಾಜ್ ಆಳ್ವ ಅವರು, ಈ ಕಾರ್ಡ್ ಎಲ್ಲಾ ನಗರದ ಬಸ್ಗಳಲ್ಲಿ ಉಪಯೋಗಿಸಬಹುದಾಗಿದೆ ಎಂದು ಹೇಳಿದ್ದಾರೆ.
ದೈನಂದಿನ ಪ್ರಯಾಣಿಕರು ಪ್ರತಿ ಟ್ರಿಪ್ಗೆ ಹತ್ತು ರೂಪಾಯಿಗಳನ್ನು ಪಾವತಿಸುತ್ತಾರೆ. ಆದರೆ ಸೂಪರ್ ಸೇವರ್ ಯೋಜನೆಯಡಿ ದೈನಂದಿನ ಪ್ರಯಾಣಿಕರು 28 ದಿನಗಳಲ್ಲಿ 100 ಟ್ರಿಪ್ಗಳನ್ನು 399 ರೂಗಳಲ್ಲಿ ಪ್ರಯಾಣಿಸಬಹುದು. ಈ ಪ್ರಕಾರವಾಗಿ ಅವರು ತಮ್ಮ ಪ್ರತಿ ಟ್ರಿಪ್ಗೆ 3.99 ರೂ. ಪಾವತಿಸಿದ್ದಂತಾಗುತ್ತದೆ. ಪ್ರಯಾಣಿಕರು ಈ ಕಾರ್ಡ್ನ್ನು ಒಂದು ದಿನದಲ್ಲಿ ಗರಿಷ್ಟ ನಾಲ್ಕು ಟ್ರಿಪ್ಗಳಿಗೆ ಬಳಸಬಹುದು ಎಂದು ಆಳ್ವ ಅವರು ತಿಳಿಸಿದ್ದಾರೆ.
20 ರೂ. ಮೌಲ್ಯದ ಹೊಸ ಚಲೋ ಕಾರ್ಡನ್ನು ಪಡೆದು ಯಾವುದೇ ಮೊತ್ತಕ್ಕೆ ರೀಚಾರ್ಜ್ ಮಾಡಬಹುದು. 50 ರೂ. ಮೌಲ್ಯದ ಹೊಸ ಚಲೋ ಕಾರ್ಡ ಅನ್ನು ಪಡೆದು ವಾಲೆಟ್ನಲ್ಲಿ 30 ರೂ. ಬ್ಯಾಲೆನ್ಸ್ ಪಡೆಯಬಹುದಾಗಿದೆ. 100 ರೂ. ಮೌಲ್ಯದ ಕಾರ್ಡ್ನಲ್ಲಿ 80 ರೂ., 200 ರೂ. ರೀಚಾರ್ಚ್ನಲ್ಲಿ 210 ರೂ., 500 ರೂ. ರೀಚಾರ್ಚ್ನಲ್ಲಿ 550 ರೂ., 1,000 ರೂ. ರೀಚಾರ್ಚ್ನಲ್ಲಿ 1100 ರೂ. ಪಡೆಯಬಹುದಾಗಿದೆ ಎಂದು ದಿಲ್ರಾಜ್ ಆಳ್ವ ಅವರು ಮಾಹಿತಿ ನೀಡಿದ್ದಾರೆ.
ಚಲೋ ಸೂಪರ್ ಸೇವರ್ ಯೋಜನೆ ಗಳನ್ನು ಪಡೆಯಲು ಪ್ರಯಾಣಿಕರು ಆಧಾರ್ ಕಾರ್ಡ್ ಅಥವಾ ಪಾನ್ಕಾರ್ಡ್ ಜೆರಾಕ್ಸ್ ಪ್ರತಿ ನೀಡಬೇಕು. ಕಾರ್ಡ್ಗಳು ಮಿಲಾಗ್ರಿಸ್ ಕಟ್ಟಡದಲ್ಲಿರುವ ದ.ಕ. ಬಸ್ ಮಾಲಕರ ಸಂಘದ ಕಚೇರಿ, ಸ್ಟೇಟ್ಬ್ಯಾಂಕ್ ಎದುರಿನ ಸಿಟಿ ಟವರ್ ಬಿಲ್ಡಿಂಗ್ನಲ್ಲಿರುವ ಚಲೋ ಕಚೇರಿ, ಬಲ್ಮಠ ರಸ್ತೆಯಲ್ಲಿನ ಮಾಂಡೊವಿ ಮೋಟರ್ಸ್ ಎದುರಿನ ಸಾಗರ್ ಟೂರಿಸ್ಟ್ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ, ಚಲೋ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗುವುದು. ಅಲ್ಲಿಂದ ಕಾರ್ಡ್ಗಳನ್ನು ಪಡೆಯಬಹುದು. ಈಗಾಗಲೇ ಸುಮಾರು 4,000 ಚಲೋ ಕಾರ್ಡ್ಗಳನ್ನು ಮಾರಾಟ ಮಾಡಲಾಗಿದೆ. ಪ್ರಸ್ತುತ 90 ರಷ್ಟು ನಗರ ಬಸ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಅದನ್ನು ನ. 14ರಂದು ಪ್ರಾರಂಭಿಸಲಾಗಿವುದು. ಈ ಕಾರ್ಡ್ಗಳು ಎರಡು ವಿಧಗಳಲ್ಲಿರುತ್ತವೆ. ಒಂದನೇ ತರಗತಿಯಿಂದ ಪಿಯುಸಿವರಗೆ ಮತ್ತು ಪದವಿ ವಿಭಾಗವಾಗಿ ವಿಂಗಡಿಸುತ್ತೇವೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಖಜಾಂಚಿ ಸುಶೀತ್ ಶೆಟ್ಟಿ, ಚಲೋ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಸಂತೋಷ್ ದೇಶ್ಪಾಂಡೆ ಉಪಸ್ಥಿತರಿದ್ದರು.