ಮಂಗಳೂರು, ಅ. 17 (DaijiworldNews/MB) : ಕೊರೊನಾ ವಾರಿಯರ್, ಎನ್ಆರ್ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಮಂಗಳೂರು ದಸರೋತ್ಸವವನ್ನು ಅಕ್ಟೋಬರ್ 17 ರ ಶನಿವಾರ ಕುದ್ರೋಳಿ ಗೋಕರ್ನಾಥೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಿದರು.





















ಮಂಗಳೂರು ದಸರ ಉದ್ಘಾಟನೆಯ ನಂತರ ಮಾತನಾಡಿದ ಡಾ.ಆರತಿ ಕೃಷ್ಣ ಅವರು, "ಕುದ್ರೋಳಿಯಲ್ಲಿ ಮಂಗಳೂರು ದಸರಾ ಉದ್ಘಾಟನೆ ಮಾಡಿರುವುದು ನನಗೆ ಒಂದು ಗೌರವದ ವಿಷಯ. ಗೋಕರ್ನಾಥೇಶ್ವರ ದೇವಸ್ಥಾನವು ದೇಶಾದ್ಯಂತ ಭಕ್ತರು ಭೇಟಿ ನೀಡುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದ್ದು ಇದಕ್ಕೆ ಕಾರಣೀಕರ್ತರಲ್ಲಿ ಜನಾರ್ಧನ ಪೂಜಾರಿ ಕೂಡಾ ಓರ್ವರು. ಈ ದೇವಾಲಯವು ಮಹಿಳೆಯರು ಮತ್ತು ವಿಧವೆಯರಿಗೆ ಪ್ರಾಮುಖ್ಯತೆ ನೀಡುವ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ನಾನು ವಿದೇಶದಿಂದ ಮಂಗಳೂರಿಗೆ ಹಿಂದಿರುಗಿದಾಗಲೆಲ್ಲಾ ನಾನು ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತೇನೆ" ಎಂದು ಹೇಳಿದರು.
"ಕೊರೊನಾ ಸಾಂಕ್ರಾಮಿಕದ ಈ ಸಮಯದಲ್ಲಿ, ವಿದೇಶದಿಂದ ಜನರನ್ನು ಭಾರತಕ್ಕೆ ಕರೆತರಲು ನಾನು ಶ್ರಮಿಸಿದೆ. ಈಗ ಕೆಲವರು ತಮ್ಮ ಕೆಲಸವನ್ನು ಪುನರಾರಂಭಿಸಲು ವಿದೇಶಕ್ಕೆ ಹೋಗಲು ಸಿದ್ಧರಿದ್ದಾರೆ. ವೀಸಾಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿರುವುದರಿಂದ, ನಾನು ನಾಗರಿಕ ವಿಮಾನಯಾನ ಸಚಿವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ" ಎಂದು ಕೂಡಾ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಶಾರದಾ ಪ್ರತಿಷ್ಟಾಪನೆ ಮಾಡುವ ಮೊದಲು ದೇವಾಲಯದ ಆವರಣದಲ್ಲಿ ಹುಲಿ ಕುಣಿತದ ತಂಡ ಸೇರಿದಂತೆ ಭವ್ಯ ಮೆರವಣಿಗೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದೇವಾಲಯದ ಖಜಾಂಚಿ ಪದ್ಮರಾಜ್, ದೇವಾಲಯದ ಅಧ್ಯಕ್ಷ ಎಚ್ ಎಸ್ ಸಾಯಿರಾಮ್ ಹಾಗೂ ಇತತರು ಉಪಸ್ಥಿತರಿದ್ದರು.