ಉಡುಪಿ, ಅ.18 (DaijiworldNews/HR): ಮದ್ದಳೆಯ ಮಾಂತ್ರಿಕ, ಶತಾಯುಷಿ ಹಿರಿಯಡ್ಕ ಗೋಪಾಲ್ ರಾವ್ (101) ಅವರು ವಯೋ ಸಹಜವಾಗಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.


ಅತ್ಯಂತ ಹಿರಿಯ ಯಕ್ಷಗಾನ ಕಲಾವಿದರಾಗಿರುವ ಅವರು ಕೋಟ ಡಾ. ಶಿವರಾಮ ಕಾರಂತ ಅವರು ಸ್ಥಾಪಿಸಿರುವ ಉಡುಪಿ ಯಕ್ಷಗಾನ ಕೇಂದ್ರದ ಆರಂಭಿಕ ಗುರುಗಳಾಗಿದ್ದರು. ಅಲ್ಲದೇ ಯಕ್ಷಗಾನದಲ್ಲಿ ಏರು ಮದ್ದಳೆಯ ಪ್ರವರ್ತಕರು ಆಗಿದ್ದರು. ಅಂಬಲಪಾಡಿ ಯಕ್ಷಗಾನ ಸಂಘವೂ ಸೇರಿದಂತೆ ಹಲವು ಹವ್ಯಾಸಿ ಸಂಘಗಳಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತದಲ್ಲಿ ಯಕ್ಷಗಾನ ಕಲಿಕೆಗೆ ಬಂದ ಪ್ರಥಮ ವಿದೇಶಿ ಮಹಿಳೆಯಾಗಿರುವ ಅಮೆರಿಕದ ಮಾರ್ತಾ ಆಸ್ಟಿನ್ ಅವರಿಗೆ, ಯಕ್ಷಗಾನದಲ್ಲಿ ಸಂಶೋಧನಾ ಪ್ರಬಂಧಕ್ಕೆ ಮಾರ್ಗದರ್ಶಕರಾಗಿದ್ದರು. ಅಲ್ಲದೇ ಅವರೊಂದಿಗೆ ಅಮೆರಿಕಕ್ಕೆ ತೆರಳಿ ಅಲ್ಲಿ ಯಕ್ಷಗಾನ ಪ್ರದರ್ಶನವನ್ನೂ ನೀಡಿದ್ದರು.
ಇನ್ನು ಅವರು ಜಾನಪದ ಅಕಾಡೆಮಿ ಮತ್ತು ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅಲ್ಲದೇ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು.
ಸ್ವತಃ ನಾಟಿ ವೈದ್ಯರೂ ಆಗಿದ್ದ ಗೋಪಾಲ ರಾಯರಿಗೆ ಯಾವುದೇ ರೋಗ ಬಾಧೆ ಇರಲಿಲ್ಲ. ತಮ್ಮ ಕೊನೆಯುಸಿರೆಳೆಯುವ ತಕವೂ ಅವರು ಆರೋಗ್ಯವಾಗಿದ್ದರು. ಮೃತರು ಪುತ್ರನನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗ ಸಂತಾಪ ಸೂಚಿಸಿದೆ.