ಉಡುಪಿ, ಅ. 18 (DaijiworldNews/PY): ಫೇಸ್ಬುಕ್ ಮೂಲಕ ಸೌದಿ ದೊರೆ ಹಾಗೂ ಅರೇಬಿಯಾದ ಪವಿತ್ರ ಕ್ಷೇತ್ರಗಳ ಕುರಿತು ಅವಹೇಳನಕಾರಿ ವಾಕ್ಯಗಳನ್ನು ಪ್ರಕಟಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತನಾದ ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ಸೃಷ್ಠಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ದ ಉಡುಪಿ ಸೆನ್ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜೂನ್ ತಿಂಗಳಿನಲ್ಲಿ ಮೂಡುಬಿದಿರೆಯ ಸಹೋದರರಾದ ಅಬ್ದುಲ್ ಹುಯೇಸ್ ಹಾಗೂ ಅಬ್ದುಲ್ ತುವೇಸ್ ಅನ್ನು ಬಂಧಿಸಲಾಗಿದ್ದು, ಈಗ ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತ ವರದಿಯನ್ನು ಜಿಲ್ಲಾಧಿಕಾರಿಗಳಿಗೂ ಕೂಡಾ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾದ ತಾಂತ್ರಿಕ ಮಾಹಿತಿ ಸೇರಿದಂತೆ ಈ ಕೃತ್ಯವನ್ನು ಆರೋಪಿಗಳೇ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಸರ್ಕಾರದ ಮುಖೇನ ಹರೀಶ್ ಬಂಗೇರ ಅವರನ್ನು ಸೌದಿಯ ಜೈಲಿನಿಂದ ಬಿಡುಗಡೆಗೊಳಿಸಿ ಕರೆದುಕೊಂಡು ಬರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಫೇಸ್ಬುಕ್ ಮೂಲಕ ಸೌದಿ ದೊರೆ ಹಾಗೂ ಅರೇಬಿಯಾದ ಪವಿತ್ರ ಕ್ಷೇತ್ರಗಳ ಕುರಿತು ಅವಹೇಳನಕಾರಿ ವಾಕ್ಯಗಳನ್ನು ಪ್ರಕಟಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತನಾದ ಹರೀಶ್ ಬಂಗೇರ ಅವರನ್ನು ಬಂಧಿಸಲಾಗಿತ್ತು.