ಮಂಗಳೂರು, ಅ. 19 (DaijiworldNews/MB) : ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ನವದುರ್ಗೆಯರ ಆಶೀರ್ವಾದ ಪಡೆಯಲು ಅಕ್ಟೋಬರ್ 18 ರ ಭಾನುವಾರದಂದು ಕರಾವಳಿ ಕರ್ನಾಟಕದ ವಿವಿಧ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಾಲಯಗಳಾದ ಕುದ್ರೋಳಿ, ಮಂಗಳಾದೇವಿ, ಕಟೀಲು, ಪೊಳಲಿ, ಕೊಲ್ಲೂರಿನಲ್ಲಿ ಭಾರಿ ಜನಸಂದಣಿ ಕಂಡು ಬಂದಿದೆ.

ನವರಾತ್ರಿ ಆರಂಭವಾಗಿ ಮೊದಲ ಭಾನುವಾರವಾದ ಹಿನ್ನೆಲೆಯಲ್ಲಿ ದೇವಾಯಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾಣಿಸಿಕೊಂಡಿದ್ದು ಸರತಿ ಸಾಲಿನಲ್ಲಿ ದೇವಾಲಯ ಪ್ರವೇಶ ಮಾಡಿದರು. ಜಿಲ್ಲಾಡಳಿತದ ಸೂಚನೆಯಂತೆ, ದೇವಾಲಯದ ವ್ಯವಸ್ಥಾಪಕರು ಒಂದು ಬಾರಿಗೆ ನೂರು ಭಕ್ತರಿಗೆ ಮಾತ್ರ ಆವರಣ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಭಕ್ತರು ಕೂಡಾ ದೇವಾಲಯದ ಆಡಳಿತ ಮಂಡಳಿಗೆ ಸಹಕಾರ ನೀಡಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದಲ್ಲಿ, ಪೊಳಲಿ ದೇವಾಲಯದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ನಗರದ ಮಂಗಳಾದೇವಿಯು ಹೆಚ್ಚಿನ ಭಕ್ತರು ಸೇರಿದ್ದ ಮತ್ತೊಂದು ದೇವಾಲಯವಾಗಿದೆ. ಕೊಲ್ಲೂರಿನಲ್ಲಿ ಸ್ಯಾನಿಟೈಝರ್ ಬಳಕೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂರತವನ್ನು ಕಾಯ್ದುಕೊಳ್ಳುವುದನ್ನು ಪಾಲಿಸಲಾಗುತ್ತಿದೆ.
ಲಲಿತಾ ಪಂಚಮಿ ದಿನ ಮಹಿಳಾ ಭಕ್ತರಿಗೆ ವಿತರಿಸಲಾಗುತ್ತಿದ್ದ ದೇವರ ಶೇಷ ವಸ್ತ್ರವನ್ನು ಈ ಬಾರಿ ಕೊರೊನಾ ಕಾರಣದಿಂದಾಗಿ ರದ್ದುಪಡಿಸಲಾಗಿದೆ ಎಂದು ಕಟೀಲು ದೇವಸ್ಥಾನ ಪ್ರಕಟನೆಯಲ್ಲಿ ತಿಳಿಸಿದೆ. ಹಾಗೆಯೇ ನವರಾತ್ರಿಯ ಮಹಾನವಮಿ, ವಿಜಯದಶಮಿ ದಿನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವುದನ್ನು ಕೂಡಾ ರದ್ದು ಮಾಡಲಾಗಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರತಿದಿನ ಮಧ್ಯಾಹ್ನ 3 ರಿಂದ 5 ರ ನಡುವೆ ದೇವರ ದರ್ಶನ ಇರುವುದಿಲ್ಲ ಎಂದು ತಿಳಿಸಿದೆ.