ಮಂಗಳೂರು, ಅ. 19 (DaijiworldNews/MB) : ''ಬೆಂಗಳೂರಿನಲ್ಲಿ ನಡೆದ ಮನೀಶ್ ಶೆಟ್ಟಿ ಕೊಲೆ ಮಾಡಿಸಿದ್ದು ನಾನೇ, ಕಿಶನ್ ಹೆಗ್ಡೆ ಕೊಲೆಗೆ ಮನೀಶ್ ಶೆಟ್ಟಿ ಸಹಕಾರ ನೀಡಿದ್ದು ಈ ಕಾರಣದಿಂದಾಗಿ ಮನೀಶ್ ಶೆಟ್ಟಿ ಕೊಲೆಯನ್ನು ನಮ್ಮ ತಂಡ ಮಾಡಿದೆ'' ಎಂದು ದಾಯ್ಜಿವಲ್ಡ್ಗೆ ದೂರವಾಣಿ ಕರೆಯಲ್ಲಿ ವಿಕ್ಕಿ ಶೆಟ್ಟಿ ಹೇಳಿದ್ದಾರೆ.

ಮನೀಶ್ ಶೆಟ್ಟಿ
''ಬೆಂಗಳೂರಿನಲ್ಲಿ ನಡೆದ ಮನೀಶ್ ಶೆಟ್ಟಿ ಕೊಲೆಯನ್ನು ನಮ್ಮ ಹುಡುಗರೇ ಮಾಡಿದ್ದು, ಅದು ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಮರ್ಡರ್ಗೆ ರಿವೇಂಜ್. ಮನೀಶ್ ಶೆಟ್ಟಿಯು ಕಿಶನ್ ಶೆಟ್ಟಿ ಮರ್ಡರ್ಗೆ ಸಹಕಾರ ನೀಡಿದ್ದ. ಅವನು ಕೋಡಿಕೆರೆ ಮನೋಜ್ಗೆ ಬಾಸ್ ಆಗಿದ್ದ. ಮನೀಶ್ ಶೆಟ್ಟಿ ಪ್ರಭಾವದಿಂದಲ್ಲೇ ಆ ಕೊಲೆಯಾಗಿದೆ. ಈತನೇ ಈ ಕೊಲೆ ಸಂಚು ರೂಪಿಸಿ ಮೀಟಿಂಗ್ ಮಾಡಿ ಎಲ್ಲಾ ಹುಡುಗರಿಗೆ ಕೊಲೆ ಮಾಡಲು ಬೆಂಬಲ ನೀಡಿದ್ದಾನೆ. ಕಿಶನ್ ಶೆಟ್ಟಿ ಕೊಲೆಯು ಈತನ ಬೆಂಬಲದಿಂದಲ್ಲೇ ನಡೆದಿದೆ. ಅದಕ್ಕಾಗಿ ಮನೀಶ್ ಶೆಟ್ಟಿ ಮೇಲೆ ನಾವು ಅಟ್ಯಾಕ್ ಮಾಡಿದೆವು'' ಎಂದು ತಿಳಿಸಿದ್ದಾರೆ.
ಇನ್ನು ಕಿಶನ್ ಶೆಟ್ಟಿ ಮರ್ಡರ್ ರಿವೇಂಜ್ ಅಲ್ಲ ಎಂದು ಹೇಳಲಾಗುತ್ತಿರುವ ಬಗ್ಗೆ ವಿಕ್ಕಿ ಶೆಟ್ಟಿಗೆ ಪ್ರಶ್ನಿಸಿದಾಗ, ''ಅದು ನನಗೆ ವಿಷಯ ತಿಳಿಯಿತು. ಅದು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಹೇಳಿದ್ದು ಒಂದು ಅವರು ತಿಳಿದುಕೊಂಡದ್ದು ಒಂದು. ನಾನು ಕಿಶನ್ ಹೆಗ್ಡೆ ಕೊಲೆಗೆ ಈ ಕೊಲೆ ರಿವೇಂಜ್ ಅಲ್ಲವೆಂದು ಹೇಳಿಲ್ಲ. ನಾನು ಕೋಡಿಕೆರೆ ಮನೋಜ್ ಹಾಗೂ ನಮಗೂ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಆದರೆ ಅವನು ಕಿಶನ್ ಹೆಗ್ಡೆ ಮರ್ಡರ್ ಮಾಡಿದ್ದು ದೊಡ್ಡ ತಪ್ಪು ಎಂದು ಹೇಳಿದ್ದೆ. ಆದರೆ ಆ ಪತ್ರಕರ್ತರು ಬೇರೆ ರೀತಿ ಅರ್ಥೈಸಿಕೊಂಡು ಅದನ್ನು ಸುದ್ದಿ ಮಾಡಿದ್ದಾರೆ'' ಎಂದು ಹೇಳಿದ್ದಾರೆ.
ಬೆಂಗಳೂರು ಅಂಡರ್ ವಲ್ಡ್ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಕ್ಕಿ ಶೆಟ್ಟಿ, "ನಾವು ಇನ್ನೊಬ್ಬರ ತಂಟೆಗೆ ಹೋಗಲ್ಲ. ಆದರೆ ನಮ್ಮ ತಂಟೆಗೆ ಬಂದವರನ್ನು ನಾವು ಬಿಡಲ್ಲ. 25 ವರ್ಷದ ಫೀಲ್ಡ್ನಲ್ಲಿ ನಾವು ಯಾರಿಗಾದರೂ ಅನ್ಯಾಯ ಮಾಡಿದ್ದನ್ನು ನೀವು ಕೇಳಿದ್ದೀರ. ನಾನು ಅಂಡರ್ ವಲ್ಡ್ ಪ್ರವೇಶ ಮಾಡುವುದು ಮೊದಲಾದವುಗಳಲ್ಲಿ ನಂಬಿಕೆ ಇರಿಸಿಲ್ಲ. ನನ್ನ ತಾಕತ್ತು ನನಗೆ ತಿಳಿದಿದೆ. ಮನೀಶ್ ಶೆಟ್ಟಿ, ಮಾಮೂಲಿ ಕಳ್ಳ, ಆತ ದೊಡ್ಡ ದೊಡ್ಡದಾಗಿ ಮಾತನಾಡುತ್ತಿದ್ದ. ಅವನಿಗೆ ಒಂದೆರಡು ವರ್ಷದ ಮೊದಲು ನಾನು ವಾರ್ನಿಂಗ್ ಕೊಟ್ಟಿದ್ದೆ. ಹಾಗೇ ನಾನು ಅಂಡರ್ ವಲ್ಡ್ಗೆ ಎಂಟ್ರಿ ಕೊಡುವುದಾದರೆ ದಯಾನಂದ್ ಪೈ ಕೇಸ್ನಲ್ಲೂ ನನ್ನ ಹೆಸರಿದೆ. ಆಗಲೂ ನಾನು ಎಂಟ್ರಿ ಕೊಡಬಹುದಿತ್ತು. ಆದರೆ ನಾನು ಕೊಟ್ಟಿಲ್ಲ. ಪಾಂಡು ಪೈ ಹತ್ಯೆ ಸಂದರ್ಭ ನಾನು ಯಾವುದೇ ಎಂಟ್ರಿ ನೀಡಿಲ್ಲ. ಇನ್ನೊಬ್ಬ ವಿಕ್ಕಿ ಎಂಬ ಹುಡುಗನ ಮರ್ಡರ್ ಆಯ್ತು ಆಗಲೂ ನಾನು ಯಾವುದೇ ಎಂಟ್ರಿ ಕೊಟ್ಟಿಲ್ಲ. ನಾನು ಹೆಸರು ಗಳಿಸಲು ಈ ಫೀಲ್ಡ್ ಮಾಡುತ್ತಿಲ್ಲ. ನಮಗೆ ಅಂತಹ ಪ್ರಚಾರದ ಅಗತ್ಯವಿಲ್ಲ'' ಎಂದು ಹೇಳಿದ್ದಾರೆ.
''ಕೋಡಿಕೆರೆ ಮನೋಜ್ ಬಳಿ ನನಗೆ ಯಾವುದೇ ಸ್ನೇಹವಿಲ್ಲ. ಹಾಗೆಯೇ ವೈಯಕ್ತಿಕ ದ್ವೇಷವೂ ಇರಲಿಲ್ಲ. ಆದರೆ ಕಿಶನ್ ಹೆಗ್ಡೆ ವಿಚಾರದಲ್ಲಿ ನನ್ನ ಬಳಿ ಬಂದಿದ್ದ. ನಾನು ಸರಿ ಮಾಡಿಕೊಳ್ಳಿ ಎಂದು ಹೇಳಿದ್ದೆ. ಇವರೆಲ್ಲಾ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಇವರು ಸಂಘಟನೆಯಂತ ಹೇಳಿ ಇದಕ್ಕಿಂತ ಮೊದಲು ನಾಲ್ಕೈದು ಹಿಂದೂ ಹುಡುಗರನ್ನು ಕೊಂದರು. ಅದಕ್ಕೆ ಏನು ಅರ್ಥ. ಸಂಘಟನೆ ಇರುವುದು ಯಾಕಾಗೀ ?. ಶಾಲೆಗೆ ಹೋಗಲು ಹಣ ಇಲ್ಲದವರಿಗೆ ನೀವು ಸಹಾಯ ಮಾಡಿ. ಸಂಘಟನೆಯ ಹೆಸರಲ್ಲಿ ಹೆಸರು ಗಳಿಸಿ, ಯಾರ್ಯಾರೋ ಮಾಡಿದ ಮರ್ಡರ್ ನಾನು ಮಾಡಿದ್ದು ಎಂದು ಹೇಳಿ ಜೈಲಲ್ಲಿ ಕೂತು ಮತ್ತೆ ಹೊರಗೆ ಬಂದು ಹಿಂದೂ ಹುಡುಗರನ್ನೇ ಕೊಲ್ಲುತ್ತಾರೆ ಎಂದು ಹೇಳಿದ್ದು ಅದರ ಅರ್ಥ ಮುಸ್ಲಿಂ ಹುಡುಗರನ್ನು ಕೊಲ್ಲಬೇಕೆಂದು ಅಲ್ಲ. ಆದರೆ ಸಂಘಟನೆಯ ಹೆಸರಲ್ಲಿ ಮುಗ್ಧ ಹುಡುಗರನ್ನು ಹತ್ಯೆ ಮಾಡುವುದು ಏನು ಸರಿ'' ಎಂದು ಪ್ರಶ್ನಿಸಿದ್ದಾರೆ.
''ಸಂಘಟನೆಯವರು ಎಂತವರು ಸಂಘಟನೆಯಲ್ಲಿ ಇಡಬೇಕು, ಇಡಬಾರದು ಎಂದು ಅಲೋಚನೆ ಮಾಡಬೇಕು. ಇಂತವರು ಸಂಘಟನೆಯಲ್ಲಿ ಇದ್ದರೆ ಸಂಘಟನೆಯ ಹೆಸರು ಹಾಳಾಗುತ್ತದೆ. ಯಾವುದೇ ಒಂದು ಸಮೂದಾಯದ ಸಂಘಟನೆ ಇದ್ದರೂ ಅದು ಆ ಸಮೂದಾಯದ ಬಡ ಜನರು ಇದ್ದಾರೆ, ಯಾರಿಗೆ ಕಷ್ಟವಿದೆ, ಯಾರಿಗೆ ಊಟವಿಲ್ಲ, ಶಾಲೆಗೆ ಹೋಗಲು ಹಣವಿಲ್ಲ ಅವರಿಗೆ ಸಹಾಯ ಮಾಡಿ. ಅದನ್ನು ಬಿಟ್ಟು ಯಾರನ್ನೋ ಕೊಲ್ಲುವುದು, ಹಣ ಮಾಡುವುದು, ಯಾರನ್ನೋ ಕಿಡ್ನಾಪ್ ಮಾಡುವುದು ಯಾಕೆ. ಕೋಡಿಕೆರೆ ಮನೋಜ್ನದ್ದು ಈ ಹಿಂದೆ ಐದಾರು ಕಿಡ್ನಾಪ್ ಕೇಸ್ ನಾನು ಕೇಳಿದ್ದೇನೆ. ಹಿಂದೂ ಹುಡುಗರ ಮರ್ಡರ್ ಮಾಡಿರುವುದನ್ನು ಕೇಳಿದ್ದೇನೆ. ಅವನದ್ದು ಏನು ಸಂಘಟನೆ'' ಎಂದು ಕೇಳಿದ್ದಾರೆ.
''ಕಿಶನ್ ಹೆಗ್ಡೆ ನನ್ನ ಹುಡುಗ ಅಂತ ನಾನು ಹೇಳಲ್ಲ. ಆದರೆ ನಾನು ನನ್ನ ಹುಡುಗರ ವಿಷಯಕ್ಕೆ ಕೈ ಹಾಕಿದ್ರೆ ಬಿಡಲ್ಲ. ಆತ ನನ್ನ ಹುಡುಗರೊಂದಿಗೆ ಇದ್ದವ. ನನ್ನೊಂದಿಗೂ ಆತ್ಮೀಯತೆಯಿಂದ ಇದ್ದ. ಕಿಶನ್ ಹೆಗ್ಡೆ ಒಳ್ಳೆ ಮನೆತನದ ಹುಡುಗ, ಮದುವೆಯಾಗಿದ್ದಾನೆ. ಈಗ ಹುಡುಗಿ ಅನಾಥಳಾದಳು. ಹಣದ ವ್ಯವಹಾರದಲ್ಲಿ ಸ್ವಲ್ಪ ವೈಮನಸ್ಸಾದರೆ ನೇರವಾಗಿ ಕೊಲ್ಲುವುದರಲ್ಲಿ ಅರ್ಥವಿದೆಯಾ.?. ಹಣದ ವಿಚಾರ ನನ್ನಲ್ಲೂ ಇತ್ತು. ಆದರೆ ಅಷ್ಟಕ್ಕೆ ಕೊಲೆ ಮಾಡುವುದಾ. ಅದಕ್ಕೆ ಒಂದು ನ್ಯಾಯವೆಂದು ಇಲ್ವಾ'' ಎಂದು ಪ್ರಶ್ನಿಸಿದ್ದು ''ನಮ್ಮ ಹುಡುಗರ ತಂಟೆಗೆ ಬಂದರೆ ನಾನು ಯಾರನ್ನೂ ಬಿಡಲ್ಲ. ನಾನು ನನ್ನ ಹುಡುಗರು ಬೇರೊಬ್ಬರ ತಂಟೆಗೆ ಹೋಗಲು ಕೂಡಾ ಬಿಡಲ್ಲ. ನಾನು ಹೋಗಲ್ಲ'' ಎಂದು ಹೇಳಿದ್ದಾರೆ.