ಮಂಗಳೂರು, ಅ. 19 (DaijiworldNews/PY): ಪಾಲಿಕೆಗೆ ಬಿಜೆಪಿ ಯಾವುದೇ ಹೊಸ ಯೋಜನೆಯನ್ನು ಮಂಜೂರು ಮಾಡಿಲ್ಲ. ಇನ್ನೂ ಸಾಲವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಮಾತ್ರವೇ ಉದ್ಘಾಟಿಸಿದೆ ಎಂದು ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಹೇಳಿದರು.

ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಅಳಕೆ ಮಾರುಕಟ್ಟೆಯ ಉದ್ಘಾಟನೆಯ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಅವರು ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದರು.
ರಾಜಕೀಯದಲ್ಲಿ ಟೀಕೆಗಳು ಸಾಮಾನ್ಯವಾಗಿದೆ. ಅಲ್ಲದೇ, ಇದು ಶಾಸಕರು ಮಾಡಿದ ಸುಳ್ಳು ಆರೋಪವಾಗಿದೆ. ಉದ್ಘಾಟನೆಯಾದ ಅಳಕೆ ಮಾರುಕಟ್ಟೆಗೆ ಟೆಂಡರ್ ನೀಡಲಾಯಿತು ಹಾಗೂ 2017ರಲ್ಲಿ ಡಿಪಿಆರ್ ಅನ್ನು 1 ಕೋಟಿ ರೂ.ಗೆ ಮಾಡಲಾಯಿತು. ನಗರದ ಎಂಟು ಮಾರುಕಟ್ಟೆಗಳಿಗೆ ನಾವು ಅಡಿಪಾಯ ಹಾಕಿದ್ದೇವೆ. ಈ ಪೈಕಿ ಕೆಲವು ಮಾರುಕಟ್ಟೆಯನ್ನು ಉದ್ಘಾಟಿಸಲಾಯಿತು ಮತ್ತು ಕೆಲವು ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.
ಶಾಸಕರ ಅಧಿಕಾರಾವಧಿಯಲ್ಲಿ ಸುಮಾರು ಮೂರು ವರ್ಷಗಳು ಕಳೆದಿವೆ. ಅವರ ಅವಧಿಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಮಂಜೂರು ಮಾಡಿಲ್ಲ. ಯುಜಿಡಿ, ಫುಟ್ಪಾತ್ ಮತ್ತು ರಸ್ತೆ ಅಗಲೀಕರಣದಂತಹ ಕಾರ್ಯಗಳು ಈಗ ಪ್ರಗತಿಯಲ್ಲಿವೆ. 2017ರಲ್ಲಿ ನಾವು 121 ಕೋಟಿ ರೂ.ಗಳ ಮೌಲ್ಯದ 87 ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಿ ಪರಿಷತ್ತಿನಲ್ಲಿ ಅನುಮತಿ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಪುರಾವೆಗಳು ಮತ್ತು ದಾಖಲೆಗಳ ಆಧಾರದ ಮೇಲೆ ನಾವು ಮಾತನಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಮಂಜೂರಾದ ಕಾರ್ಯಗಳಿಗೆ ಬಿಜೆಪಿ ಮನ್ನಣೆ ನೀಡುತ್ತಿದೆ, ಇದು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ ಎಂದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅವರು ಮಾತನಾಡಿ, ಅಳಕೆ ಮಾರುಕಟ್ಟೆಯ ಉದ್ಘಾಟನೆಯ ಸಮಯದಲ್ಲಿ, ಶಾಸಕರು ಅಳಕೆ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಅಳಕೆ ಮಾರುಕಟ್ಟೆಯನ್ನು ನವೀಕರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ನಗರದ ಹೆಸರಾಂತ ಮಾರುಕಟ್ಟೆಯಾದ ಕೇಂದ್ರ ಮಾರುಕಟ್ಟೆಯಲ್ಲಿನ ಪರಿಸ್ಥಿತಿಗಳನ್ನು ಸುಧಾರಿಸಲು ಅವಕಾಶ ಮಾಡಿಕೊಡಿ. ಯಾವುದೇ ಪರ್ಯಾಯ ವ್ಯವಸ್ಥೆಗಳನ್ನು ಮಾಡದೆ ಮಾರುಕಟ್ಟೆಯನ್ನು ಮುಚ್ಚಲು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಪರಿಕಲ್ಪನೆಯು ಯುಜಿಡಿ, ಫುಟ್ಪಾತ್ ಮತ್ತು ರಸ್ತೆಗಳ ಬಗ್ಗೆ ಅಲ್ಲ. ಸ್ಮಾರ್ಟ್ ಸಿಟಿ ಪ್ರವಾಸೋದ್ಯಮ, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು, ಆರ್ಥಿಕ ಅಭಿವೃದ್ಧಿಯ ಬಗೆಗಿನ ಯೋಜನೆಯಾಗಿದೆ. ಆದರೆ ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಹೇಳಿದರು.