ಬೈಂದೂರು, ಅ. 19 (DaijiworldNews/MB) : ಬೈಂದೂರು ಕ್ಷೇತ್ರದ ಶಾಸಕರಿಗೆ ಕೊರೊನಾ ಬಂದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಮಾದ್ಯಮಗಳಲ್ಲಿ ಕೊರೊನಾ ಚಿಕಿತ್ಸೆಗೆ ಬೈಂದೂರು ಶಾಸಕರು ಮೂರು ಲಕ್ಷದ ಆರವತ್ತು ಸಾವಿರ ಪಾವತಿಸಿರುವುದು ಪ್ರಸಾರವಾಗಿದೆ. ಇದು ಗೊಂದಲಕಾರಿ ವಿಚಾರವಾಗಿದ್ದು, ಶಾಸಕರು ಕೊರೊನಾದಿಂದ ಎಲ್ಲಿ ಚಿಕಿತ್ಸೆ ಪಡೆದಿದ್ದಾರೆ? ಎಲ್ಲಿ ಕೊರೋನಾ ಪರೀಕ್ಷೆ ಮಾಡಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ವಿಚಾರ ಸತ್ಯವೇ ಈ ಬಗ್ಗೆ ಶಾಸಕರೇ ಜನರಿಗೆ ತಿಳಿಸಬೇಕಾಗಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಅಂದರೆ ಬಿಳಿ ಹಾಳೆಯಂತೆ ಇರಬೇಕು. ಈ ವಿಚಾರವನ್ನು ಅವರು ಸ್ಪಷ್ಟ ಪಡಿಸಬೇಕು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಲಿ ಶಾಸಕರಿಗೆ ಹೇಳಿದ್ದಾರೆ.

ಸುದ್ಧಿಗಾರರ ಜೊತೆ ಮಾತನಾಡಿದ ಅವರು, ನಾನೂ ಸಹ ಕೊರೊನಾಕ್ಕೆ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಈಗ ಗುಣಮುಖನಾಗಿದ್ದೇನೆ. ಆದರೆ ನಾನು ಗಮನಿಸಿದ ಹಾಗೆ ಶಾಸಕರಿಗೆ ಕೊರೊನಾ ಬಂದಿಲ್ಲ. ಹಾಗಾದರೆ ಹಣ ಪಾವತಿಯ ಗೊಂದಲ ಏಕೆ? ಎಂದು ಅವರು ಪ್ರಶ್ನಿಸಿದರು.
ವಂಡ್ಸೆ ಸ್ವಾವಲಂಬನಾ ಕೇಂದ್ರವನ್ನು ಅಧಿಕಾರಿಗಳು ಕಾನೂನು ಬಾಹಿರವಾಗಿ ತೆರವುಗೊಳಿಸಿರುವುದ ವಿರುದ್ಧ 3ನೇ ದರಣಿ ಸತ್ಯಾಗ್ರಹ ನಡೆಯುತ್ತಿದೆ. ಇಲ್ಲಿಯ ತನಕ ಕ್ಷೇತ್ರದ ಶಾಸಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಸತ್ಯಾಗ್ರಹ ನಿರತನ್ನು, ಒಕ್ಕೂಟದವರನ್ನು ಮಾತನಾಡಿಸಿಲ್ಲ. ಹೀಗೆ ಮುಂದುವರಿದರೆ ಜಿಲ್ಲೆಯಾದ್ಯಂತ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಅವರು ತಿಳಿಸಿದರು