ಮಂಗಳೂರು, ಅ. 19 (DaijiworldNews/PY): ನಗರದ ಖಾಸಗಿ ಸಿಬಿಎಸ್ಇ ಶಾಲೆಯು ಶುಲ್ಕವನ್ನು ಪಾವತಿಸದ ಕಾರಣ ವಿದ್ಯಾರ್ಥಿಗಳನ್ನು ತನ್ನ ವಾಟ್ಸಾಪ್ ಗುಂಪಿನಿಂದ ತೆಗೆದುಹಾಕಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಶಿಕ್ಷಕರು ವಾಟ್ಸಾಪ್ ಗ್ರೂಪ್ನ ಮೂಲಕ ಅಧ್ಯಯನಕ್ಕೆ ಸಂಬಂಧಿಸಿದಂತ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಅ.15 ರಂದು ಹಲವಾರು ವಿದ್ಯಾರ್ಥಿಗಳನ್ನು ಏಕಾಏಕಿ ತೆಗೆದುಹಾಕಲಾಗಿದೆ. ಈ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಅಕ್ಟೋಬರ್ 15 ರಂದು ನಮ್ಮ ಮಕ್ಕಳ ಹೆಸರುಗಳನ್ನು ಆನ್ಲೈನ್ ತರಗತಿ ಗುಂಪಿನಿಂದ ತೆಗೆದುಹಾಕಿದ್ದಾರೆ. ಇದರಿಂದ ನಮಗೆ ಬೇಸರವಾಗಿದೆ. ನಾವು ಶುಲ್ಕ ಪಾವತಿಸದ ಕಾರಣ ಹೆಸರನ್ನು ತೆಗೆದುಹಾಕಿದ್ದಾರೆ. ನನ್ನ ಹಿರಿಯ ಪುತ್ರನಿಗೆ ಈ ವಿಚಾರದಿಂದ ಆಘಾತವಾಗಿದೆ. ಹಣವು ಮೊದಲ ಆದ್ಯತೆಯಾಗಿರುವ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಬದಲು ಕೆಲಸ ಮಾಡಬೇಕೆ? ಎಂದು ಕೇಳಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.
ಏತನ್ಮಧ್ಯೆ, ಇನ್ನೊಬ್ಬ ಪೋಷಕರು ಸರ್ಕಾರದ ಆದೇಶದಂತೆ, ಶಿಕ್ಷಣ ಸಂಸ್ಥೆಗಳು ಪೋಷಕರನ್ನು ಶುಲ್ಕ ಪಾವತಿಸಲು ಒತ್ತಾಯ ಮಾಡುವಂತಿಲ್ಲ. ಶಾಲಾ ನಿರ್ವಹಣೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.
ನಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿದ್ದ ಸಂದರ್ಭ, ಐದು ವರ್ಷಗಳವರೆಗೆ ಶುಲ್ಕವನ್ನು ಹೆಚ್ಚಿಸಲಾಗುವುದಿಲ್ಲ ಎಂದು ಆಡಳಿತ ನಮಗೆ ಭರವಸೆ ನೀಡಿತ್ತು. ಆದರೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿಯೇ ಶುಲ್ಕವನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ನಾವು ಶುಲ್ಕವನ್ನು ಕಡಿತಗೊಳಿಸುವಂತೆ ಮನವಿ ಮಾಡಿದ್ದೆವು. ಆದರೆ, ನಮ್ಮ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ.
ಮತ್ತೊಂದೆಡೆ, ಹಿಂದಿನ ವರ್ಷದ ಆರೋಪಗಳನ್ನು ಇತ್ಯರ್ಥಪಡಿಸುವಲ್ಲಿ ಪೋಷಕರು ವಿಫಲರಾಗಿದ್ದರಿಂದ ವಿದ್ಯಾರ್ಥಿಗಳನ್ನು ತೆಗೆದುಹಾಕಲಾಗಿದೆ ಎಂದು ಶಾಲಾ ಪ್ರಾಂಶುಪಾಲರು ಹೇಳಿದ್ದಾರೆ. ಪೋಷಕರು ಶುಲ್ಕವನ್ನು ಪಾವತಿಸದಿದ್ದರೆ ಶಾಲೆ ನಡೆಸುವುದು ಕಷ್ಟ ಎಂದು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಪೋಷಕರು ಈ ಬಗ್ಗೆ ಲಿಖಿತವಾದ ದೂರು ದಾಖಲಿಸಬೇಕು. ಇಲ್ಲವಾದಲ್ಲಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಶಿಕ್ಷಣ ಸಂಸ್ಥೆಗಳು ಪೋಷಕರನ್ನು ಶುಲ್ಕ ಪಾವತಿಸಲು ಒತ್ತಾಯ ಮಾಡುವಂತಿಲ್ಲ ಎನ್ನುವ ಸರ್ಕಾರದ ಆದೇಶವು ಸ್ಪಷ್ಟವಾಗಿದೆ ಎಂದು ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ಹೇಳಿದ್ದಾರೆ.