ಕುಂದಾಪುರ, ಅ. 19 (DaijiworldNews/PY): ವಂಡ್ಸೆ ಗ್ರಾ.ಪಂ.ನಿಂದ ನಡೆಸಲ್ಪಡುತ್ತಿದ್ದ ನೂರಾರು ಮಂದಿ ಮಹಿಳೆಯರಿಗೆ ವರದಾನವಾಗಿದ್ದ ಅಲ್ಲಿನ ಸ್ವಾವಲಂಬನಾ ಹೊಲಿಗೆ ವೃತ್ತಿ ತರಬೇತಿ ಕೇಂದ್ರವನ್ನು ಶಾಸಕರ ನೇತೃತ್ವದಲ್ಲಿ ರಾತ್ರೋ-ರಾತ್ರಿ ಮುಚ್ಚಿರುವುದು ಅಕ್ಷಮ್ಯ. ಆದಷ್ಟು ಬೇಗ ಈ ನೊಂದ ಮಹಿಳೆಯರು, ಪಂಚಾಯತ್ನವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಮಾತನಾಡಿ. ಸಂತ್ರಸ್ತರಿಗೆ ನ್ಯಾಯ ಕೊಡಿಸಿ. ಇಲ್ಲದಿದ್ದರೆ ನಾವು ಈ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.








ವಂಡ್ಸೆಯ ಸ್ವಾವಲಂಬನಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ಮುಚ್ಚಿರುವುದನ್ನು ಖಂಡಿಸಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಮತ್ತು ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾ.ಸಮಿತಿ ಕುಂದಾಪುರ ಆಶ್ರಯದಲ್ಲಿ ಸೋಮವಾರ ಕಟ್ಬೆಲ್ತೂರು ಗ್ರಾ.ಪಂ. ಬಳಿ ನಡೆದ ಸರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಅವರು,
ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ನೊಂದ ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಬೈಂದೂರು ಕ್ಷೇತ್ರ, ಕುಂದಾಪುರ, ಜಿಲ್ಲಾ ಮಟ್ಟದವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ನೀವು ಗೆದ್ದ ನಂತರ ಇಡೀ ಕ್ಷೇತ್ರಕ್ಕೆ ಶಾಸಕರು, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲ ಜನರನ್ನು ಸಮಾನವಾಗಿ ಕಾಣುವುದು ನಿಮ್ಮ ಕರ್ತವ್ಯ. ಗೆದ್ದ ಬಳಿಕ ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು ಅಂತ ಹೇಳಿ ಸುಳ್ಳು ಹೇಳಿ ಈಗ ಏನು ಮಾಡದೇ ವಚನ ಭ್ರಷ್ಟರಾಗಿದ್ದೀರಿ. ಸೌಕೂರು ಏತ ನೀರಾವರಿ ಯೋಜನೆ ತರುವಲ್ಲಿ ನನ್ನ ಹಾಗೂ ಪ್ರತಾಪ್ಚಂದ್ರ ಶೆಟ್ಟಿ ಅವರ ಶ್ರಮವೂ ಇದೆ ಎಂದು ಸ್ಪಷ್ಟಪಡಿಸಿದರು.
ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಮಹಿಳೆಯರಿಗೆ ಪರ್ಯಾಯ ವ್ಯವಸ್ಥೆಯಾಗುವವರೆಗೆ ತೆರವು ಮಾಡಲು ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದರೂ ಕೇಳದೇ, ರಾತ್ರಿ ವೇಳೆ ಬೀಗ ಒಡೆದು, ಅಲ್ಲಿರುವ ಪರಿಕಗಳನ್ನು ಹೊರ ಹಾಕಿ, ತಪ್ಪೆಸಗಿದ್ದಾರೆ. ಸ್ವಾವಲಂಬನಾ ಕೇಂದ್ರದ ಮೂಲಕ ಸ್ವದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಮಹಿಳೆಯರ ವಿರುದ್ಧ ಈ ರೀತಿ ಮಾಡಿರುವುದು ಸರಿಯಲ್ಲ ಎಂದರು.
ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾ. ಸಮಿತಿ ಸಂಚಾಲಕ ಉದಯ ಕುಮಾರ್ ತಲ್ಲೂರು, ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮುಖಂಡರಾದ ನಾಗಪ್ಪ ಕೊಠಾರಿ, ಮಂಜುಳಾ ದೇವಾಡಿಗ, ಶ್ರೀನಿವಾಸ ಗಾಣಿಗ, ತಾ.ಪಂ. ಸದಸ್ಯ ಉದಯ ಪೂಜಾರಿ, ಸಂತೊಷ್ ಕುಮಾರ್ ಶೆಟ್ಟಿ ಬಲ್ಲಾಡಿ, ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ರೈತ ಸಂಘದ ತ್ರಾಸಿ ವಲಯ ಅಧ್ಯಕ್ಷ ಶರತ್ ಶೆಟ್ಟಿ ಬಾಳಿಕೆರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.