ಮಂಗಳೂರು, ಮೇ 22 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಬಜ್ಪೆಯ ಕೆಂಜಾರಿನಲ್ಲಿ ಸಂಭವಿಸಿದ್ದ ವಿಮಾನ ದುರಂತದ ಕಹಿ ಘಟನೆಗೆ ಇಂದಿಗೆ 8 ವರ್ಷ. ದೇಶ ಕಂಡ ಅತಿ ದೊಡ್ಡ ದುರಂತದಲ್ಲಿ 158 ಮಂದಿ ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದ್ದರು. 2010 ರ ಮೇ 22 ರಂದು ಕೆಂಜಾರಿನಲ್ಲಿರುವ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಆರು ಗಂಟೆ ವೇಳೆಗೆ ನಡೆದಿದ್ದ ದುರಂತದಲ್ಲಿ ಎಂಟು ಮಂದಿ ಮಾತ್ರ ಬದುಕುಳಿದಿದ್ದರು.
ದುರಂತದ ಮಡಿದವರ ಸ್ಮಾರಕಾರ್ಥ ಇಂದು ಮಂಗಳೂರಿನ ಕೂಳೂರು ಸೇತುವೆ ಪಕ್ಕದ ಉದ್ಯಾನವನದಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ದ.ಕ. ಜಿಲ್ಲಾಡಳಿತ, ನವಮಂಗಳೂರು ಬಂದರು ಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಆಯೋಜಿಸಿದ ಕಾರ್ಯಕ್ರಮದಲಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ವೈಶಾಲಿ, ದ.ಕ. ಜಿಪಂ ಸಿಇಒ ಡಾ. ಎಂ.ಆರ್.ರವಿ, ಮಂಗಳೂರು ಸಹಾಯಕ ಆಯುಕ್ತ ಮಹೇಶ್ ಕರ್ಜಗಿ, ದ.ಕ. ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಮುರಳಿ ಮೋಹನ್ ಚೂಂತಾರ್, ಡಿಸಿಪಿ ಉಮಾ ಪ್ರಶಾಂತ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಎನ್ಎಂಪಿಟಿ ಅಧ್ಯಕ್ಷ ಸುರೇಶ್ ಪಿ.ಶಿರ್ವಾಡ್ಕರ್, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಭಾರ ನಿರ್ದೇಶಕ ಅಬ್ರಹಾಂ ಕೊಶಿ, ಮೀರಾ ಕುಸೂರ್ ಹಹಾಗೂ ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು ಮತ್ತಿತರರು ಭಾಗವಹಿಸಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.