ಬೆಂಗಳೂರು, ಮೇ 22: ರಾಜ್ಯದ ಸಮ್ಮಿಶ್ರ ಸರ್ಕಾರದ ರಚನೆಯಲ್ಲಾಗಲಿ ಅಥವಾ ಸರ್ಕಾರ ರಚಿಸಿದ ಬಳಿಕ ಆಡಳಿತದಲ್ಲಾಗಲಿ, ಯಾವುದೇ ರೀತಿಯಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ರಚನೆಯ ಬಗ್ಗೆ ಕೆಲವು ಊಹಪೋಹಾಗಳು ಹರಿದಾಡುತ್ತಿರುವುದನ್ನು ಗಮನಿಸಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ದೇವೇಗೌಡರು, 'ಸಮ್ಮಿಶ್ರ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರಗಳ ಬಗ್ಗೆ ಆಗಲಿ, ಮಂತ್ರಿ ಮಂಡಲದ ರಚನೆಯ ಬಗ್ಗೆ ಆಗಲಿ, ಸಮನ್ವಯ ಸಮಿತಿ ರಚನೆಯ ಬಗ್ಗೆ ಆಗಲಿ ಹಾಗೂ ಸರ್ಕಾರದ ಆಡಳಿತ ವಿಚಾರದಲ್ಲಾಗಲಿ ನಾನು ಬಾಗಿಯೂ ಆಗುವುದಿಲ್ಲ ಅಥವಾ ನನ್ನ ಹಸ್ತಕ್ಷೇಪವು ಇರುವುದಿಲ್ಲ' ಎಂದು ತಿಳಿಸಿದ್ದಾರೆ.