ಮಂಗಳೂರು, ಮೇ.22: ಮಂಗಳೂರು ಮೂಲದ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್ನ್ಯಾಶನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಖ್ಯಾತ ನಿರ್ದೇಶಕ ನರೇಂದ್ರಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷಿತ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಲನ ಚಿತ್ರ ಮೇ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಈ ಬಗ್ಗೆ ಮೇ 22ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಹೊಸ ಬಗೆಯ ಚಿತ್ರವಾಗಿದ್ದು, ಹಿರಿಯ ನಟ ಅನಂತ್ ನಾಗ್ ಮತ್ತು ಯುವ ನಟಿ ರಾಧಿಕ ಚೇತನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ ಎಂದರು. ಕಬ್ಬಡ್ಡಿ, ಸಂತೆಯಲ್ಲಿ ನಿಂತ ಕಬೀರ ಸೇರಿದಂತೆ ಹೊಸಬಗೆಯ ಸಿನಿಮಾ ಮಾಡಿರುವ ನಿರ್ದೇಶಕ ನರೇಂದ್ರಬಾಬು, ಕನ್ನಡ ಚಿತ್ರರಂಗದಲ್ಲಿ ಈವರೆಗೂ ಯಾರು ಮಾಡದಂಥ ವಿಭಿನ್ನ ಕಥಾ ಹಂದರವನ್ನು ಇಟ್ಟುಕೊಂಡು ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಕತೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವ ಸಿನಿಮಾ ಚಿತ್ರಕಥೆಯಲ್ಲಿ ಬಹಳ ರೋಚಕತೆಯಿಂದ ಮಾಡಿದೆ. ಈ ಸಿನಿಮಾ ಚಿತ್ರದ ಕಥೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಕಾರಣದಿಂದಾಗಿ ಸ್ಯಾಂಡಲ್ವುಡ್ನಲ್ಲಿ ಭರವಸೆ ಮೂಡಿಸಿದೆ. ಮಾತ್ರವಲ್ಲದೇ ಚಿತ್ರದ ಟ್ರೈಲರ್ ಕೂಡ ವಿಭಿನ್ನವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ ಎಂದರು.
ಬಳಿಕ ಮಾತನಾಡಿದ ಸಿನಿಮಾದ ನಿರ್ದೇಶಕ ನರೇಂದ್ರಬಾಬು ಅವರು, ಇದು ಎರಡು ಜನರೇಷನ್ ಕಥೆ ಹೊಂದಿದೆ. ಒಂದು ಅನಂತ್ ನಾಗ್ ಅವರ ಕಥೆ ಸಾಗಿದರೆ, ಇನ್ನೊಂದು ರಾಧಿಕಾ ಚೇತನ್ ಜನರೇಷನ್ ಕಥೆ ತೆರೆದುಕೊಳ್ಳುತ್ತೆ. ಮುಖ್ಯವಾಗಿ ಲಿವಿಂಗ್ ರಿಲೇಷನ್ ಶಿಪ್ ಕುರಿತಾದ ಹೂರಣವಿದೆ. ಈ ಎರಡೂ ಕಥೆಗಳಲ್ಲಿ ಸೂಕ್ಷ್ಮತೆಗಳಿವೆ. ಭದ್ರತೆ, ಅಭದ್ರತೆ ಕುರಿತಾದ ಅಂಶಗಳು ಚಿತ್ರದಲ್ಲಿವೆ ಎಂದು ಹೇಳಿದರು.
ರಂಗಿತರಂಗ ಚಿತ್ರದ ಯಶಸ್ವಿ ನಾಯಕಿ ರಾಧೀಕ ಚೇತನ್ ಅವರು ಮಾತನಾಡಿ, ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಿರಿಯ ನಟ ಅನಂತ್ ನಾಗ್ ಅವರ ಜೊತೆ ಅಭಿನಯಿಸಲು ಅವಕಾಶ ಲಭಿಸಿರುವುದು ನನ್ನ ಭಾಗ್ಯ, ಅವರಿಂದ ಸಾಕಷ್ಟು ಕಲಿತಿದ್ದೇನೆ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪರು ನಮಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ ಎಂದರು
ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯನ್ನು "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರ ಮುಡಿಗೇರಿಸಿಕೊಂಡಿದೆ. ದುಬೈನಲ್ಲಿ ಚಿರಪರಿಚಿತ ಖ್ಯಾತ ಉದ್ಯಮಿಯಾಗಿರುವ ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರ್ನಡಿಯಲ್ಲಿ ನಿರ್ಮಿಸಲಾಗಿದ್ದ 'ಮಾರ್ಚ್-22 ' ಸಿನೆಮಾದ ಹಾಡಿನ ಗೀತಾ ರಚನೆಗೆ ಇತ್ತೀಚಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಶೇರಿಗಾರ್ ಅವರ ಹಿರಿಯ ಸಹೋದರ ಪ್ರಕಾಶ್ ಶೇರಿಗಾರ್ ಉಪಸ್ಥಿತರಿದ್ದರು.