ಬೆಂಗಳೂರು, ಮೇ 22 : ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಮುಂದೂಡಲಾಗಿದ್ದ ಚುನಾವಣೆ ಜೂನ್ 11ರಂದು ನಡೆಯಲಿದ್ದು, ದಿವಂಗತ ಬಿ.ಎನ್. ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದರ ಬೆನ್ನಲ್ಲೇ ಜಯನಗರದ ಬಿಜೆಪಿ ವಲಯದಲ್ಲಿ ಅಸಮಾಧಾನ ಹೊಗೆಯಾಡಲು ಪ್ರಾರಂಭಿಸಿದೆ. ಪಕ್ಷದಲ್ಲಿ ಸಕ್ರಿಯಾಗಿರದ ವಿಜಯಕುಮಾರ್ ಅವರ ಸೋದರನಿಗೆ ಅನುಕಂಪದ ಆಧಾರದಲ್ಲಿ ಟಿಕೆಟ್ ನೀಡಿದ್ದು, ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಮೇಯರ್ ಎಸ್.ಕೆ. ನಟರಾರ್, ಮಾಜಿ ಕಾರ್ಪೊರೇಟರ್ ಸಿ.ಕೆ. ರಾಮಮೂರ್ತಿ, ಭೈರಸಂದ್ರ ಕಾರ್ಪೊರೇಟರ್ ಎನ್. ನಾಗರಾಜು ಅವರ ಅಸಮಧಾನಕ್ಕೆ ಕಾರಣವಾಗಿದೆ.
ಇನ್ನು ಇಲ್ಲಿ ಕಾಂಗ್ರೆಸ್ ನಿಂದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಸ್ಪರ್ಧಿಸಿದ್ದರೆ ಸಾಮಾಜಿಕ ಹೋರಾಟಗಾರ ರವಿಕೃಷ್ಣ ರೆಡ್ಡಿ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.