ಕಾಸರಗೋಡು,ಅ. 21 (DaijiworldNews/HR): ವಿದ್ಯಾರ್ಥಿಯೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಕಲ ಠಾಣಾ ವ್ಯಾಪ್ತಿಯ ತೃಕ್ಕನ್ನಾಡ್ ಎಂಬಲ್ಲಿ ನಡೆದಿದೆ.

ತೃಕ್ಕನ್ನಾಡ್ ನ ಪ್ರಸಾದ್ ರಾಘವರವರ ಪುತ್ರ, ಏಳನೇ ತರಗತಿ ವಿದ್ಯಾರ್ಥಿ ಕೆ. ವಿಘ್ನೇಶ್ ( 13) ಮೃತಪಟ್ಟ ಬಾಲಕ.
ಮಂಗಳವಾರ ಸಂಜೆ ತಾಯಿ ಮತ್ತು ಸಹೋದರಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಈತ ಕೃತ್ಯ ನಡೆಸಿದ್ದಾನೆ . ಇಬ್ಬರು ಮನೆಗೆ ಮರಳಿದಾಗ ವಿಘ್ನೇಶ್ ಫ್ಯಾನ್ ಗೆ ನೇಣು ಬಿಗಿದಿರುವುದು ಕಂಡು ಬಂದಿದೆ. ಕೂಡಲೇ ಈತನನ್ನು ಉದುಮದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಕಾಸರಗೋಡಿನಲ್ಲಿರುವ ಅಜ್ಜಿ ಮನೆಯಲ್ಲಿದ್ದ ವಿಘ್ನೇಶ್ ಕೆಲ ದಿನಗಳ ಹಿಂದೆ ತೃಕ್ಕನ್ನಾಡ್ ನಲ್ಲಿರುವ ಮನೆಗೆ ಬಂದಿದ್ದನು. ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ತಂದೆ ಪ್ರಸಾದ್ ಗಲ್ಫ್ ಉದ್ಯೋಗಿಯಾಗಿದ್ದು, ಸುದ್ದಿ ತಿಳಿದು ಊರಿಗೆ ಹೊರಟಿದ್ದಾರೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.