ಕಾಸರಗೋಡು,ಅ. 21 (DaijiworldNews/HR): ಕಾಸರಗೋಡಿನ ಚೆಂಗಳದಲ್ಲಿ ಬಹುಮಾನ ಲಭಿಸಿಲ್ಲ ಎಂದು ಆಟೋ ರಿಕ್ಷಾ ಚಾಲಕ ಚೂರಿಪಳ್ಳದ ಮನ್ಸೂರ್ ಅಲಿ (42) ಲಾಟರಿ ಟಿಕೆಟನ್ನು ಹರಿದು ಬಿಸಾಡಿದ್ದು, ಬಳಿಕ ಟಿಕೆಟ್ನಲ್ಲಿ ಐದು ಲಕ್ಷ ರೂ ಬಹುಮಾನ ಬಂದ ಘಟನೆ ನಡೆದಿದೆ.

ಅಕ್ಟೋಬರ್ 19 ರಂದು ಪ್ರಕಟವಾದ ಕೇರಳ ಲಾಟರಿಯ ಎರಡನೇ ಬಹುಮಾನವಾದ ಐದು ಲಕ್ಷ ರೂ ಲಭಿಸಿತ್ತು. ಮಂಗಳವಾರ ಬೆಳಿಗ್ಗೆ ನೆಲ್ಲಿಕಟ್ಟೆಯ ಆಟೋ ಸ್ಟ್ಯಾಂಡ್ ಗೆ ತಲಪಿದ ಮನ್ಸೂರ್ ರವರು ಏಜಂಟ್ ಬಳಿ ಇದ್ದ ಪಟ್ಟಿಯಲ್ಲಿನ ಲಾಟರಿ ಫಲಿತಾಂಶ ಗಮನಿಸಿದ್ದು , ಕೊನೆಯ ಸಾಲಿನ ನಂಬ್ರಗಳನ್ನು ನೋಡಿದ ಮನ್ಸೂರ್ ಬಹುಮಾನ ಲಭಿಸಿಲ್ಲ ಎಂದು ಕೈಯಲ್ಲಿದ್ದ ಮೂರು ಲಾಟರಿ ಟಿಕೆಟ್ ಗಳನ್ನು ಹರಿದು ಬಿಸಾಡಿದ್ದರು. ಗಂಟೆಗಳು ಕಳೆದು ಏಜಂಟ್ ಆಟೋ ಸ್ಟ್ಯಾಂಡ್ ಗೆ ಬಂದು ಐದು ಲಕ್ಷ ರೂ. ಬಹುಮಾನ ಬಂದಿರುವುದಾಗಿ ತಿಳಿಸಿದ್ದು, ಬಳಿಕ ಹರಿದು ಬಿಸಾಡಿದ್ದ ಟಿಕೇಟನ್ನು ಮನ್ಸೂರ್ ಹಾಗೂ ಇತರ ಚಾಲಕರು ಸೇರಿ ಒಟ್ಟುಗೂಡಿಸಿದರು.
ಆದರೆ ಜಿಲ್ಲಾ ಲಾಟರಿ ಕಚೇರಿಗೆ ವಿಷಯ ತಿಳಿಸಿದಾಗ ಶಾಸಕರ ಪತ್ರ ಸಹಿತ ರಾಜ್ಯ ಲಾಟರಿ ನಿರ್ದೇಶಕರಿಗೆ ಮನವಿ ಸಲ್ಲಿಸಲು ತಿಳಿಸಲಾಯಿತು.
ಬಹುಮಾನ ಲಭಿಸಬಹುದು ಎಂಬ ನಿರೀಕ್ಷೆಯನ್ನು ಮನ್ಸೂರ್ ಅಲಿ ಹೊಂದಿದ್ದಾರೆ . ಟಿಕೆಟ್ ನ್ನು ಚೂರು ಚೂರು ಮಾಡಿರುವುದರಿಂದ ಅದರಲ್ಲಿನ ನಂಬರ್ ನೋಡಿ ಬಹುಮಾನ ನೀಡುವಂತಿಲ್ಲ. ಆದರೆ ಹರಿದ ಟಿಕೇಟನ್ನು ಜೋಡಿಸಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸಮರ್ಪಕವಾಗಿ ಕಂಡು ಬಂದಲ್ಲಿ ಬಹುಮಾನ ಲಭಿಸಿದೆ. ಅಂತಿಮ ತೀರ್ಮಾನ ರಾಜ್ಯ ಲಾಟರಿ ನಿರ್ದೇಶಕರದ್ದಾಗಿದೆ ಎಂದು ತಿಳಿದು ಬಂದಿದೆ.