ಬಂಟ್ವಾಳ, ಅ 21 (DaijiworldNews/SM): ತುಳು ಚಲನಚಿತ್ರ ನಟ, ಛಾಯಾಗ್ರಾಹಕ, ಗ್ರಾಫಿಕ್ ಡಿಸೈನರ್, ರೌಡಿಶೀಟರ್ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಸುರೇಂದ್ರ ಭಂಡಾರಿ ಯಾನೆ ಸುರೇಂದ್ರ ಬಂಟ್ವಾಳ್(39) ಅವರನ್ನು ಮನೆಯೊಳಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.


ಬಂಟ್ವಾಳ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ಎಂಬಲ್ಲಿರುವ ವಸ್ತಿ ಅಪಾರ್ಟ್ ಮೆಂಟ್ ನ ಐದನೇ ಮಹಡಿಯಲ್ಲಿರುವ ಮನೆಯಲ್ಲಿ ಸುರೇಂದ್ರ ಬಂಟ್ವಾಳ ಅವರ ಹತ್ಯೆ ನಡೆಸಲಾಗಿದೆ. ಹತ್ಯೆ ನಡೆಸಿದ ಆರೋಪಿಗಳು ಬಳಿಕ ಬಾಗಿಲ ಚಿಲಕ ಹಾಕಿ ಪರಾರಿಯಾಗಿದ್ದಾರೆ. ಬುಧವಾರ ಮದ್ಯಾಹ್ನದ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು ಆರೋಪಿಗಳ ಪತ್ತೆಗೆ ಪೋಲೀಸರು ಎರಡು ತಂಡ ರಚಿಸಿದ್ದಾರೆ ಎಂದು ತಿಳಿದುಬಂದಿದೆ.
2018ರಲ್ಲಿ ಬಂಟ್ವಾಳ ಪೇಟೆಯಲ್ಲಿ ತಲವಾರು ಬೀಸಿದ್ದರು:
ಸುರೇಂದ್ರನ್ ಬಂಟ್ವಾಳದಲ್ಲಿ ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಅನೇಕ ಪ್ರಕರಣಗಳಲ್ಲಿ ಬಂಟ್ವಾಳ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಆ ಬಳಿಕ ಹಿಂದೂ ಸಂಘಟನೆಯಿಂದ ದೂರ ಸರಿದು ವ್ಯವಹಾರದಲ್ಲಿ ಬ್ಯುಸಿಯಾಗಿದ್ದರು. 2018ರ ಜೂನ್ 11ರಂದು ವೈಯಕ್ತಿಕ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸುರೇಂದ್ರ ಬಂಟ್ವಾಳ ಅವರು ಬಂಟ್ವಾಳ ಪೇಟೆಯಲ್ಲಿ ತಲವಾರು ಜಲಪಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ಚಾಲಿಪೋಲಿಲು, ದಬಕ್ ದಬ ಐಸಾ ಹಾಗೂ ಕನ್ನಡದ ಸವರ್ಣದೀರ್ಘ ಸಂಧಿ ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಛಾಯಾಗ್ರಹಕರಾಗಿಯೂ ಪರಿಚಿತರಾಗಿದ್ದರು.
ಸ್ನೇಹಿತರೇ ಚೂರಿ ಹಾಕಿದರಾ?
ಮಂಗಳವಾರ ರಾತ್ರಿ ವೇಳೆ ಸ್ನೇಹಿತರೋರ್ವ ವಸ್ತಿ ಪ್ಲಾಟ್ ನಲ್ಲಿರುವ ಮನೆಗೆ ಊಟ ನೀಡುವ ವೇಳೆ ಆತನ ಜೊತೆ ಪ್ರತಿದಿನ ಇರುವ ಸ್ನೇಹಿತ ಒಬ್ಬ ಮಾತ್ರ ಇದ್ದ ಎನ್ನಲಾಗಿದೆ. ಆದರೆ, ಇಂದು ಆತನ ಪತ್ತೆಯೇ ಇಲ್ಲ. ಆತನ ಫೋನ್ ಸ್ವಿಚ್ ಆಫ್ ಆಗಿದ್ದು ಆತನ ಪತ್ತೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನ ಪತ್ತೆಯಾದ ಬಳಿಕ ಆರೋಪಿಗಳ ಸುಳಿವು ಸಿಗುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ.
ಇಬ್ಬರಿಂದ ಹತ್ಯೆ ಶಂಕೆ, ಸಿಸಿಟಿವಿಯಲ್ಲಿ ಸೆರೆ:
ಇನ್ನು ಸಿಸಿ ಕ್ಯಾಮಾರದ ಪೂಟೇಜ್ ಗಳ ಅಧಾರದ ಪ್ರಕಾರ ಎರಡು ಮಂದಿ ಆರೋಪಿಗಳ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಸುಳಿವು ಸಿಕ್ಕಿದ್ದು, ಆರೋಪಿಗಳ ಬಂಧನಕ್ಕೆ ತಂಡ ಕಾರ್ಯಪ್ರವೃತ್ತವಾಗಿದೆ. ಕೊಲೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ ವಾದರೂ ಮೇಲ್ನೋಟಕ್ಕೆ ಹಣದ ವಿಚಾರವಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಮೀಪ್ರಸಾದ್ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಗ್ರಾಮಾಂತರ ಎಸ್ಐ ಪ್ರಸನ್ನ, ಟ್ರಾಫಿಕ್ ಎಸ್ ಐ ರಾಜೇಶ್ ಕೆ.ವಿ. ಬೆಳ್ತಂಗಡಿ ಎಸ್ಐ ನಂದಕುಮಾರ್, ಬಂಟ್ವಾಳ ಅಪರಾಧ ಎಸ್ಐಗಳಾದ ಕಲೈಮಾರ್, ಸಂಜೀವ ಕೆ , ಬೆರಳಚ್ಚು ತಜ್ಞ ರು,ಶ್ವಾನದಳ ಅಗಮಿಸಿ ತನಿಖೆ ನಡಸಲಾಗುತ್ತಿದೆ.
ಎಸ್.ಪಿ.ಲಕ್ಮೀಪ್ರಸಾದ್ ಪ್ರತಿಕ್ರಿಯೆ:
ಸುರೇಂದ್ರ ಬಂಟ್ವಾಳ ಅವರ ಫೋನ್ ಸಿಗುತ್ತಿಲ್ಲ ಎಂದು ಸಂಶಯ ಬಂದು ಠಾಣೆಗೆ ಬಂದಿರುವ ಕರೆಯಂತೆ ಪ್ಲಾಟ್ ಗೆ ಬಂದು ನೋಡಿದಾಗ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿ ಇತ್ತು. ಬಾಗಿಲು ಮುರಿದು ಒಳಗೆ ನೋಡಿದಾಗ ಸುರೇಂದ್ರ ಬಂಟ್ವಾಳ ಅವರ ಮೃತದೇಹ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ರಾತ್ರಿ ವೇಳೆ ಸುರೇಂದ್ರ ಬಂಟ್ವಾಳ ಅವರ ಕೊಲೆ ನಡೆದಿರಬಹುದು ಎಂಬ ಸಂಶಯವಿದೆ. ಯಾವ ಪ್ರದೇಶಗಳಲ್ಲೇಲ್ಲ ಅವರ ವ್ಯವಹಾರವಿದೆ ಅದರ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತಿದೆ. ಈ ಪ್ಲಾಟ್ ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕೆಲವೊಂದು ಮಾಹಿತಿ ಲಭ್ಯವಾಗಿದ್ದು ತನಿಖೆ ಮುಂದುವರಿದಿದೆ. ಇಲ್ಲಿರುವ ಸಾಕ್ಷ್ಯಗಳನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಆತನ ಜೊತೆ ಓರ್ವ ಸ್ನೇಹಿತ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ ಅದರ ತನಿಖೆಯು ನಡೆಯುತ್ತಿದೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ಆರೋಪಿಗಳ ಪತ್ತೆಗೆ ಮೂರು ತಂಡಗಳ ರಚನೆ:
ಇನ್ನು ಆರೋಪಿಗಳ ಕೆಲವೊಂದು ಸುಳಿವು ಲಭ್ಯವಾಗಿದ್ದು, ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ.ಸೋಜ ನೇತ್ರತ್ವದಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ತಂಡ, ಬಂಟ್ವಾಳ ಗ್ರಾಮಾಂತರ ಎಸ್ ಐ ಪ್ರಸನ್ನ ಮತ್ತು ಬೆಳ್ತಂಗಡಿ ಎಸ್ ಐ ನಂದಕುಮಾರ್ ಅವರ ನೇತೃತ್ವದಲ್ಲಿ ಮತ್ತೊಂದು ಸೇರಿದಂತೆ ಒಟ್ಟು ಮೂರು ತಂಡಗಳು ರಚನೆಯಾಗಿದ್ದು ಕಾರ್ಯಾಚರಣೆ ತೀವ್ರಗೊಂಡಿದೆ ಎಂದು ತಿಳಿದುಬಂದಿದೆ.