ಮಂಗಳೂರು, ಅ 21 (DaijiworldNews/SM): ಭಾರಿ ಮಳೆಯಿಂದಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಹಾಗೂ ಕುಡುಪು ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಭೂ ಕುಸಿತ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಮತ್ತೊಂದು ಹಂತದ ಪರಿಹಾರ ಮೊತ್ತ ಬಿಡುಗಡೆಯಾಗಿದೆ. ಇದೀಗ ರಾಜ್ಯ ಸರಕಾರ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಭೂ ಕುಸಿತ ಉಂಟಾಗಿರುವ ಪಚ್ಚನಾಡಿ, ಕುಡುಪು ಪ್ರದೇಶಗಳಿಗೆ ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಬಿಡುಗಡೆಗೊಳಿಸಲಾಗಿದೆ. ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿ, ಕುಡುಪು ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉಂಟಾದ ಭೂ ಕುಸಿತದಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಅಂದಾಜು 20 ಕೋಟಿ ರೂ. ಪರಿಹಾರ ಪಾವತಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಎಸ್.ಎಫ್.ಸಿ 2019-20ನೇ ಸಾಲಿನ ವಿಶೇಷ ಅನುದಾನದಿಂದ 14 ಕೋಟಿ ಬಿಡುಗಡೆಗೊಳಿಸಿದೆ. ಇನ್ನು ಈ ಹಿಂದೆಯೇ ರಾಜ್ಯ ಸರಕಾರವು 8 ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಅದರ ಉಳಿದ ಭಾಗವಾಗಿ 14 ಕೋಟಿ ರೂ. ಅನುದಾನವನ್ನು ಇದೀಗ ಬಿಡುಗಡೆಗೊಳಿಸಲಾಗಿದೆ.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ.ವೇದವ್ಯಾಸ್ ಕಾಮತ್, ಡಾ ಭರತ್ ಶೆಟ್ಟಿಯವರ ಅವಿರತ ಶ್ರಮದ ಫಲವಾಗಿ ರಾಜ್ಯ ಸರಕಾರ 14 ಕೋಟಿ ಬಿಡುಗಡೆಗೊಳಿಸಿದೆ.