ಮಂಜೇಶ್ವರ, ಮೇ 23: ಮರದ ದಿಮ್ಮಿಗಳ ರಾಶಿಯ ನಡುವೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಾಲಕ ಸಾವಿಗೀಡಾಗಲು ಆಂತರಿಕ ರಕ್ತಸ್ರಾವ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವರ್ಕಾಡಿ ಬೇಕರಿ ಜಂಕ್ಷನ್ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಗಂಗಾಧರ ಆಚಾರ್ಯ-ಶಾರದಾ ದಂಪತಿ ಪುತ್ರ ಶ್ರವಂತ್ ಆಚಾರ್ಯ (9) ಮೊನ್ನೆ ಸಂಜೆ ಮನೆ ಸಮೀಪದ ಮಿಲ್ಲೊಂದರ ಬಳಿ ರಾಶಿ ಹಾಕಿದ್ದ ಮರದ ದಿಮ್ಮಿಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಮಲಗಿದ್ದ ರೀತಿಯಲ್ಲಿ ಕಂಡುಬಂದಿದ್ದನು. ಆತನ ದೇಹದಲ್ಲಿದ್ದ ಗಾಯಗಳು ಹಲವು ಶಂಕೆಗೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡುಹೋಗಿ ತಜ್ಞ ಪರಿಶೀಲನೆ ನಡೆಸಲಾಗಿತ್ತು.
ಬಾಲಕ ಆಟವಾಡುತ್ತಿದ್ದ ಸಂದರ್ಭ ಮರದ ದಿಮ್ಮಿಯಿಂದ ಬಿದ್ದು ಲಿವರ್ಗೆ ಏಟು ಬಿದ್ದು, ಇದರಿಂದ ಆಂತರಿಕ ರಕ್ತ ಸಂಚಾರ ಮೊಟಕುಗೊಂಡು ಸಾವು ಸಂಭವಿಸಿದೆಯೆಂದು ತಿಳಿದುಬಂದಿದೆ. ಬಿದ್ದ ವೇಳೆ ಕುತ್ತಿಗೆ ಹಾಗೂ ತೊಡೆಗಳಿಗೆ ಗಾಯವುಂಟಾಗಿರಬಹುದೆಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಿನ್ನೆ ಉನ್ನತ ಪೊಲೀಸಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿನೀಡಿ ತಪಾಸಣೆ ನಡೆಸಿದ್ದಾರೆ.ಮೃತದೇಹವನ್ನು ನಿನ್ನೆ ಸಂಜೆ ಮನೆಗೆ ತರಲಾಗಿದ್ದು, ಹೊಸಂಗಡಿ ಬಳಿಯ ರಾಮತ್ತಮಜಲು ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.