ಮಂಗಳೂರು, ಅ.22 (DaijiworldNews/HR): ಕಾಂಗ್ರೆಸ್ ಮಾಜಿ ಶಾಸಕ ಬಿ.ಎ. ಮೊಯ್ದೀನ್ ಬಾವಾ ಅವರು ತಮ್ಮ ಕ್ಷೇತ್ರದ ದೇವಸ್ಥಾನದಲ್ಲಿ ನಡೆದ ಆಚರಣೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಲಪಂಥೀಯ ಬೆಂಬಲಿಗರಿಂದ ಬೆದರಿಕೆ ಕರೆ ಬಂದಿದೆ ಎಂದು ತಿಳಿದು ಬಂದಿದೆ.

ಮಂಗಳೂರು ಉತ್ತರ ಕ್ಷೇತ್ರದ ಭಾಗವಾಗಿರುವ ಸುಂಕದಕಟ್ಟೆ ಅನ್ನಪೂರ್ಣೇಶ್ವರಿ ದೇವಸ್ಥಾನ ಆಯೋಜಿಸಿದ್ದ ಪೂಜೆಯಲ್ಲಿ ಭಾಗವಹಿಸಿದ್ದೆ. ದೇವಾಲಯದ ಟ್ರಸ್ಟಿಗಳು ಮತ್ತು ಪುರೋಹಿತರು ಬಿಜೆಪಿ ಶಾಸಕ ಭರತ್ ಶೆಟ್ಟಿಯನ್ನು ಆಹ್ವಾನಿಸಿದಂತೆ ನನ್ನನ್ನು ಆಹ್ವಾನಿಸಿದ್ದರು. ಕೆಲವು ಕಾರಣಗಳಿಂದಾಗಿ ಅವರು ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ನಾನು ಸಮಾರಂಭದಲ್ಲಿ ಭಾಗವಹಿಸಲು ಹೋದಾಗ, ಆ ಸಮಯದಲ್ಲಿ ಅಕ್ಕಿ ಸುರಿಯುವ ಆಚರಣೆ ಪ್ರಾರಂಭವಾಗಿತ್ತು, ಆಗ ನನ್ನಲ್ಲಿ ಪುರೋಹಿತರು ಮತ್ತು ಟ್ರಸ್ಟಿಗಳು ಅಕ್ಕಿ ಸುರಿಯಲು ಹೇಳಿದದ್ದು, ನನಗೆ ಅದನ್ನು ತಿರಸ್ಕರಿಸಲು ಆಗಲಿಲ್ಲ, ಹಾಗಾಗಿ ನಾನು ಅಕ್ಕಿ ಸುರಿಯುವ ಆಚರಣೆಯನ್ನು ಮಾಡಿದೆ ಎಂದರು.
ಇನ್ನು ಕೊಪ್ಪರಿಗೆಗೆ ಅಕ್ಕಿ ಸುರಿಯುತ್ತಿರುವ ಚಿತ್ರ ವೈರಲ್ ಆಗಿದ್ದು, ಮುಂಬೈಯಿಂದ ಹನಿ ಎಂಬ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ದೇವಸ್ಥಾನದಲ್ಲಿ ಆಚರಣೆಯಲ್ಲಿ ಭಾಗಿಯಾಗಿದ್ದಕ್ಕೆ ಕರೆ ಮಾಡಿ ಬೆದರಿಕೆ ಹಾಕಿರುವ ವ್ಯಕ್ತಿ ನಾನು ನನ್ನ ಮಿತಿ ಮೀರಬಾರದು ಎಂದಿದ್ದಾರೆ ಎಂದು ಮೋಯ್ದಿನ್ ಬಾವಾ ತಿಳಿಸಿದ್ದಾರೆ.
ಹಾಗೆಯೇ ತಾನು ಇಸ್ಲಾ ಧರ್ಮದಲ್ಲಿ ದೃಢವಾದ ನಂಬಿಕೆಯುಳ್ಳವನು. ಧಾರ್ಮಿಕವಾಗಿ ಇಸ್ಲಾಂನ್ನು ಪಾಲಿಸುತ್ತೇನೆ. ಆದರೆ ಅದು ನನ್ನನ್ನು ಇತರೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದನ್ನು ತಡೆಯುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮೊಯ್ದೀನ್ ಬಾವಾ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.