ಉಡುಪಿ, ಅ. 22 (DaijiworldNews/MB) : ಸ್ಥಳೀಯ ಆಡಳಿತಗಳ ಮೀಸಲಾತಿ ಗೊಂದಲಕ್ಕೆ ಸದ್ಯದಲ್ಲೆ ತೆರೆ ಬೀಳುವ ಸೂಚನೆ ಕಾಣುತ್ತಿವೆ. ಚುನಾಯಿತ ಸದಸ್ಯರಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಆಶಾ ಭಾವನೆ ಮೂಡಿದೆ. ರಾಜ್ಯದ ಎಲ್ಲ 59 ನಗರ ಸಭೆಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಏಕ ಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ತಡೆಯನ್ನು ಹೈಕೋರ್ಟ್ ದ್ವಿಸದಸ್ಯ ಇದೀಗ ಮತ್ತೆ ತೆರವು ಮಾಡಿದೆ. ಅಲ್ಲದೆ ಇದೇ ನವೆಂಬರ್ 2 ರೊಳಗೆ ಮೀಸಲಾತಿ ಅಂತಿಮ ಪಟ್ಟಿ ಮಾಡಿ ಚುನಾವಣೆ ನಡೆಸಬೇಕು ಎಂಬ ಆದೇಶ ಹೊರಡಿಸಿದೆ.

ನಗರಸಭಾ ಚುನಾಯಿತ ಸದಸ್ಯರಿಗೆ ಇನ್ನೇನು ಮೀಸಲಾತಿ ಘೋಷಣೆಯಾಗಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಆಗಿಯೇ ಬಿಡುತ್ತದೆ. ಎರಡು ವರ್ಷಧ ವನವಾಸ ಮುಗಿಯುತ್ತದೆ. ಅಧಿಕಾರ ಸಿಗುತ್ತದೆ ಅನ್ನುವಷ್ಟರಲ್ಲೆ ಸದಸ್ಯರಲ್ಲಿ ಗರಿಗೆದರಿದ್ದ ಉತ್ಸಾಹ ಹೈಕೋರ್ಟ್ ತಡೆಯಾಜ್ಞೆಯಿಂದ ಮತ್ತೆ ತಣ್ಣಗಾಗಿದೆ. ಆದರೆ ದ್ವಿ-ಸದಸ್ಯ ಪೀಠ ನೀಡಿದ ದಿನಾಂಕ ನಗರ ಸಭೇಯ ಚುನಾಯಿತ ಸದಸ್ಯರಲ್ಲಿ ಮತ್ತೊಮ್ಮೆ ಆಶಾ ಭವನೆ ಮೂಡಿಸಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ 2018 ರ ಸೆ. 3 ರಂದು ಹೊರಡಿಸಿದ್ದ ಅಧಿಸೂಚನೆ ಹಿನ್ನೆಲೆಯಲ್ಲಿ ಹೈ ಕೋರ್ಟ್ನಲ್ಲಿ ಕಾನೂನು ಹೋರಾಟ ಅಂತಿಮವಾಯಿತು ಅನ್ನುವಾಗಲೇ ಅಕ್ಟೋಬರ 15 ರಂದು ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ತಂದಿದೆ.
ನಗರಸಭೆ ಚುನಾವಣೆ ನಡೆದು, ಅಲ್ಲಿಗೆ ಜನಪ್ರತಿನಿಧಿಗಳು ಸಂವಿಧಾನಬದ್ಧವಾಗಿ ಆಯ್ಕೆಯಾಗಿ ಬರೋಬ್ಬರಿ ಎರಡು ವರ್ಷ ಕಳೆದಿವೆ. ಆದರೂ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಆಗಿಲ್ಲ. ಫಲಿತಾಂಶ ಪ್ರಕಟಗೊಂಡ ಸೆ. 3ರಂದೇ ಸರಕಾರ ಎಲ್ಲ ಪೌರಾಡಳಿತ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿತ್ತು. ಉಡುಪಿ ನಗರಸಭೆಯ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯೂ ಆಗಬೇಕಿತ್ತು. ಈ ನಡುವೆ ಸರಕಾರ ಕೆಲವೊಂದು ಪೌರಾಡಳಿತ ಸಂಸ್ಥೆಗಳ ಮೀಸಲಾತಿ ಬದಲಾಯಿಸಿದ್ದು ಮತ್ತು ಅದರ ವಿರುದ್ಧ ಕೆಲವು ಪೌರಾಡಳಿತ ಸಂಸ್ಥೆಗಳು ಮೇಲ್ಮನವಿ ಸಲ್ಲಿಸಿದ್ದು ಆಯ್ಕೆಯ ವಿಳಂಬಕ್ಕೆ ಕಾರಣವಾಯಿತು.
ಉಡುಪಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ಸಿಕ್ಕಿತ್ತು. ಕಳೆದ ಎರಡು ವರ್ಷದಿಂದ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಆಡಳಿತ ವ್ಯವಸ್ಥೆ ಜಾರಿಯಾಗಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ನಗರದ ಬೇರುಮಟ್ಟದ ಸಮಸ್ಯೆ ಗೊತ್ತಿರುವುದಿಲ್ಲ. ಅದನ್ನು ಮನವರಿಕೆ ಮಾಡಿಕೊಡಲು ಜನಪ್ರತಿನಿಧಿಗಳ ಬೇಕು.
ಇದರಿಂದ ಚುನಾಯಿತ ಸದಸ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಆಗಿತ್ತು. ಯಾವ ಕಾಮಗಾರಿ ಅಭಿವೃದ್ಧಿಯ ಕೆಲಸ ಮಾಡಲು ಸಾಧ್ಯವಾಗ್ತಾ ಇರ್ಲಿಲ್ಲ. ಪ್ರತಿಜ್ಞೆ ಪಡೆದ ನಂತರವಷ್ಟೇ ಅಧಿಕಾರಾವಧಿ ಗಣನೆಗೆ ಬರುತ್ತದೆ ಆದರೂ ಎರಡು ವರ್ಷ ಮೀಸಲಾತಿ ಗೊಂದಲದಲ್ಲೇ ಕಳೆದು ಹೋಯ್ತು ಎನ್ನುವ ಅಸಮಾಧಾನ ಪ್ರತಿ ಸದಸ್ಯರಲ್ಲೂ ಇದೆ.
ಪ್ರಸ್ತುತ ಜನಪ್ರತಿನಿಧಿಗಳು ಇಲ್ಲದ ಕಾರಣದಿಂದ ಎಲ್ಲದಕ್ಕೂ ಅಧಿಕಾರಿ ಮತ್ತು ಸಿಬಂದಿಗಳನ್ನು ಜನರು ಅವಲಂಭಿಸಬೇಕಿದೆ. ಆದರೆ ಅಧಿಕಾರಿ ಶಾಹಿ ಸುಖಾಸುಮ್ಮನೆ ಸರಿಯಾದ ಕಾಲಕ್ಕೆ ಕೆಲಸಗಳನ್ನು ಮಾಡಿಕೊಡದೆ ಇರುವುದು ಸಾರ್ವಜನಿಕರು ಜನಪ್ರತಿನಿಧಿಗಳಿಗೆ ದೂರು ನೀಡುತ್ತಿದ್ದಾರೆ.
ನಗರಸಭೆ ಬೆನ್ನಲ್ಲೇ ಪುರಸಭೆ ಪಟ್ಟಣ ಪಂಚಾಯತ್ಗಳಿಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ ಇದೀಗ ಹೈಕೋರ್ಟ್ ನಗರಸಭಾ ಚುನಾವಣೆಗೆ ಅಸ್ತು ಎಂದಿದೆ.
ಉಡುಪಿ ನಗರಸಭೆಯ ಒಟ್ಟು 35 ವಾರ್ಡ್ಗಳಲ್ಲಿ 31 ವಾರ್ಡ್ಗಳನ್ನು ಬಿಜೆಪಿ ತೆಕ್ಕೆಗೆ ಬಂದಿದ್ದರೆ, 4 ಸ್ಥಾನ ಕಾಂಗ್ರೆಸ್ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯು ಮೂರು ಪುರ ಸಭೆ, ಒಂದು ನಗರಸಭೆ ಮತ್ತು ಒಂದು ಪಟ್ಟಣ ಪಂಚಾಯತ್ ಒಳಗೊಂಡಿದೆ.