ಉಡುಪಿ, ಅ 22 (DaijiworldNews/SM): ಮಲ್ಪೆ ಕಡಲ ತಡಿಯಲ್ಲಿ ಕಾನೂನುಬಾಹಿರವಾಗಿ ತಮಿಳುನಾಡು ಮೀನುಗಾರರು ಅಕ್ರಮ ಮೀನುಗಾರಿಕೆ ನಡೆಸಿದ್ದು ಮಾತ್ರವಲ್ಲದೆ, ಮಲ್ಪೆಯಲ್ಲಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗೆ ಹಾನಿಯಾಗಿದೆ.


ಹೊರ ರಾಜ್ಯದ ಮೀನುಗಾರರು ಆಗಾಗ ಕರ್ನಾಟಕದ ಗಡಿ ಪ್ರದೇಶ ಉಲ್ಲಂಘಿಸಿ ಮೀನುಗಾರಿಕೆ ನಡೆಸಿರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂದು ಮುಂಜಾನೆ ಮಲ್ಪೆಯಲ್ಲಿ ತಮಿಳುನಾಡಿನ ಮೀನುಗಾರರು ಕೇರಳದ ಬೋಟಿನಲ್ಲಿ ಲೈಟ್ ಅಳವಡಿಸಿ ಮೀನುಗಾರಿಕೆ ನಡೆಸುತ್ತಿದ್ದರು. ಲೈಟ್ ಫಿಶಿಂಗ್ ನಿಷೇಧವಿರಿವುದರಿಂದ ಮತ್ತು ಹೊರ ರಾಜ್ಯದಿಂದ ಬೋಟ್ ಗಳು ಕರ್ನಾಟಕ ಪ್ರವೇಶಿಸಿರುವುದರಿಂದ ಮಲ್ಪೆಯ ಪರ್ಷಿಯನ್ ಬೋಟ್ ಮೀನುಗಾರರು ಆಕ್ಷೇಪಿಸಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಸುಮಾರು 8ರಿಂದ 10 ಮಂದಿ ಹೊರರಾಜ್ಯದ ಮೀನುಗಾರರು ಇದ್ದು ಆಕ್ಷೇಪವೆತ್ತಿದ ಕಾರಣ ಎರಡು ಕಡೆಯೂ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಮಲ್ಪೆಯ ಮಕರ ಸಂಕ್ರಾಂತಿ ಬೋಟಿಗೆ ತಮಿಳು ಮೀನುಗಾರರು ಗೂಂಡ ನಡೆಸಿ ಹಾನಿ ಮಾಡಿದ್ದಾರೆ.
ಕೇರಳದ ಇಂಡಿಯನ್ ಎನ್ನುವ ಬೋಟನ್ನು ಪರ್ಷಿಯನ್ ಬೋಟ್ ಮಾಲೀಕ ಸೇರಿದಂತೆ ಇತರರು ಸೇರಿ ಬಂದರಿಗೆ ತಂದಿದ್ದು, ಗಲಾಟೆಯಲ್ಲಿ ಇಬ್ಬರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಪದೇ ಪದೇ ಈ ರೀತಿಯ ಘಟನೆಯ ಬಗ್ಗೆ ಪರ್ಷಿಯನ್ ಬೋಟ್ ಮೀನುಗಾರರು ಆಕ್ಷೇಪವೆತ್ತಿದ್ದು, ನೂರಕ್ಕೂ ಹೆಚ್ಚು ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳು ವಾಪಸು ಬಂದಿದ್ದು, ಈ ಉಲ್ಲಂಘನೆ ಮಾಡಿದವರ ವಿರುದ್ಧ ಸರಿಯಾದ ಕ್ರಮ ತೆಗೆದು ಕೊಳ್ಳುವಂತೆ ಆಗ್ರಹಿಸಿದ್ದಾರೆ. ಕರಾವಳಿ ಕಾವಲು ಪಡೆ ಪೊಲೀಸರು ಮತ್ತು ಮಲ್ಪೆ ಸ್ಟೇಷನ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿಯನ್ನು ಹತೋಟಿಗೆ ತರಲಾಗಿದೆ.