ಕಾಸರಗೋಡು, ಅ 22 (DaijiworldNews/SM): ಕೆಲಸಕ್ಕಿದ್ದ ಮನೆಯಿಂದಲೇ ಚಿನ್ನಾಭರಣ ಹಾಗೂ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನ ನಿವಾಸಿಗಳಾದ ಇಬ್ಬರು ಯುವತಿಯರನ್ನು ಬಂಧಿಸಲಾಗಿದೆ. ಬಂಧಿತರನ್ನು ಪೂರ್ಣಿಮಾ(25) ಮತ್ತು ಪ್ರಮೀಳಾ(24) ಎಂದು ಗುರುತಿಸಲಾಗಿದೆ.

ವರ್ಕಾಡಿ ಕಟ್ಟತ್ತಾಜೆಯ ಸುಹಾಸಿನಿ ಎಂಬವರ ಮನೆಯಲ್ಲಿ ನಡೆದ ಕಳವಿಗೆ ಸಂಬಂಧಪಟ್ಟಂತೆ ಕಳ್ಳಿಯರನ್ನು ಬಂಧಿಸಲಾಗಿದೆ. ಫೆಬ್ರವರಿಯಲ್ಲಿ ಕೃತ್ಯ ನಡೆದಿತ್ತು. ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ, ನಗದು, ಮೊಬೈಲ್ ಫೋನ್, ಎಟಿಎಂ ಕಾರ್ಡ್ ಮೊದಲಾದವುಗಳನ್ನು ಕಳವು ಮಾಡಲಾಗಿತ್ತು.
ಬಳಿಕ ಕರ್ನಾಟಕ ಬ್ಯಾಂಕ್ ನ ಎಟಿಎಂ ಕಾರ್ಡ್ ಬಳಸಿ 25 ಸಾವಿರ ರೂಪಾಯಿ ಡ್ರಾ ಮಾಡಿರುವುದು ಬೆಳಕಿಗೆ ಬಂದಿತ್ತು. ಕಳ್ಳಿಯರು ಒಂದು ವರ್ಷದಿಂದ ವರ್ಕಾಡಿಯ ಸುಹಾಸಿನಿಯರ ಮನೆಯಲ್ಲಿ ಮನೆ ಕೆಲಸ ನಿರ್ವಹಿಸುತ್ತಿದ್ದರು. ಸುಹಾಸಿನಿಯವರು ಮಧ್ಯಾಹ್ನ ಮಲಗಿದ್ದ ಸಂದರ್ಭದಲ್ಲಿ ಕೃತ್ಯ ನಡೆಸಲಾಗಿತ್ತು. ಇಬ್ಬರು ಹಾಸನದಲ್ಲಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಹಾಸನಕ್ಕೆ ತೆರಳಿದ ಮಂಜೇಶ್ವರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.