ಮಂಗಳೂರು, ಅ. 23 (DaijiworldNews/MB) : ನಾಡ ಕಾಡುವ ಹುಲಿಯನ್ನು, ಕಾಡಿಗಟ್ಟದೆ ಬಿಡೆವು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಟಾಂಗ್ ನೀಡಿದ್ದಾರೆ.

ನಳಿನ್ ಕುಮಾರ್ ಕಟೀಲ್ ಅವರು ''ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆ ಮುಗಿದ ಬಳಿಕ ಬಂಡೆ ಛಿದ್ರವಾಗುತ್ತದೆ, ಹುಲಿಯಾ ಕಾಡಿಗೆ ಹೋಗಬೇಕಾಗುತ್ತದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯನವರು, ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ 'ಸಂತೋಷ' ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್.ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದ್ದರು.
ಸಿದ್ದರಾಮಯ್ಯ ಅವರ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ನಳಿನ್ ಕುಮಾರ್, ಕಾರ್ಯಕರ್ತರ ಸಂತೋಷಕ್ಕೆ ರಾಜ್ಯಾಧ್ಯಕ್ಷರಾಗಿದ್ದಾರೆ. ಬಂಡೆ ಒಡೆಯುವುದು, ಟಗರಿಗೆ ಡಿಕ್ಕಿ ಹೊಡೆಯುವುದು, ಸಾಂದರ್ಭಿಕ ಮಾತು. ನೆನಪಿರಲಿ, ಕಳೆದ ಉಪಚುನಾವಣೆಯಲ್ಲಿ 15ರಲ್ಲಿ 12ಕ್ಷೇತ್ರ ಗೆದ್ದಿದ್ದು, ಮುಂದೆ ಶಿರಾ, ಆರ್.ಆರ್ ನಗರ ಗೆಲ್ಲುವುದು, ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲೆ. ನಾಡ ಕಾಡುವ ಹುಲಿಯನ್ನು, ಕಾಡಿಗಟ್ಟದೆ ಬಿಡೆವು ಎಂದು ಟಾಂಗ್ ನೀಡಿದ್ದಾರೆ.