ಉಳ್ಳಾಲ, ಮೇ 23 : ಉಳ್ಳಾಲದ ಕೋಡಿ ಸಮೀಪ ಗೋಳಿ ಮರದಲ್ಲಿ ಬಾವಳಿಗಳ ರಾಶಿಯೇ ನೆಲೆಸಿದ್ದು, ಇದೀಗ ಕೇರಳದಲ್ಲಿ ಬಾವಲಿಯಿಂದ ಹರಡುತ್ತಿದೆ ಎನ್ನಲಾದ ನಿಫಾ ವೈರಸ್ ಸೋಂಕಿನಿಂದ ಜನ ಆತಂಕಗೊಂಡು ಸ್ಥಳೀಯಾಡಳಿತ ಉಳ್ಳಾಲ ನಗರಸಭೆಗೆ ದೂರು ನೀಡಿದ್ದಾರೆ.
ಕೋಡಿ ಮೊಹಿಯುದ್ದೀನ್ ಮಸೀದಿ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಮೀಪ ಇರುವ ಗೋಳಿ ಮರದಲ್ಲಿ ಬಾವಳಿಗಳ ರಾಶಿ ಹಲವು ವರ್ಷಗಳಿಂದ ಇದೆ. ಸದ್ಯ ಹರಡುತ್ತಿರುವ ನಿಫಾ ವೈರಸ್ ನಿಂದ ಆತಂಕಿತರಾಗಿರುವ ಸ್ಥಳೀಯ ನಾಗರಿಕರ ತಂಡ ನಗರಸಭೆಗೆ ದೂರು ನೀಡಿದೆ. ಸುಮಾರು 350 ಮನೆಗಳು, ಮಸೀದಿ , ದೇವಸ್ಥಾನಗಳಿವೆ. ಸಮುದ್ರ ತೀರದ ಪ್ರದೇಶ ಆಗಿರುವುದರಿಂದ ಕೇರಳ ಭಾಗದಲ್ಲಿನ ಬಾವಲಿಗಳು ಇಲ್ಲಿಗೆ ಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಗರಸಭೆಯ ಸಹಕಾರದೊಂದಿಗೆ ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.