ಕಾಸರಗೋಡು, ಅ.23 (DaijiworldNews/PY): ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದ್ದ ನಿಷೇಧಾಜ್ಞೆಯನ್ನು ಅಕ್ಟೋಬರ್ 31ರ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಸೋಂಕು ನಿಯಂತ್ರಣದ ದೃಷ್ಟಿಯಿಂದ ಅಕ್ಟೋಬರ್ 3 ರಿಂದ ಸೆಕ್ಷನ್ 144 ರಂತೆ ಕೇರಳದಲ್ಲಿ ನಿಷೇಧಾಜ್ಞೆಯನ್ನು ಜಾರಿಗೆ ತರಲಾಗಿತ್ತು. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಹಂತ ಹಂತವಾಗಿ ನಿಷೇದಾಜ್ಞೆ ಜಾರಿಗೆ ತರಲಾಗಿತ್ತು.
ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪರಪ್ಪ, ಒಡೆಯಂಚಾಲ್, ಪನತ್ತಡಿ ಪೇಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ.
ಈ ಪ್ರದೇಶಗಳಲ್ಲಿ ಐದಕ್ಕಿಂತ ಅಧಿಕ ಮಂದಿ ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ, ವಿವಾಹಕ್ಕೆ 50 ಮಂದಿ, ಮರಣಾನಂತರದ ಕಾರ್ಯಕ್ರಮಗಳಿಗೆ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.