ಉಡುಪಿ, ಅ. 23 (DaijiworldNews/HR): ವಾಹನಗಳು ಗುಂಡಿಗಳನ್ನು ತಪ್ಪಿಸುತ್ತಾ ಕುಣಿದಾಡುತ್ತಾ ಹೋಗುತ್ತಿರುವ ದೃಶ್ಯ ಉಡುಪಿಯ ನಗರದ ಗುಂಡಿಬೈಲು ವಾರ್ಡಿನಲ್ಲಿರುವ ಪ್ರಮುಖ ರಸ್ತೆಯದ್ದು.ಈ ರಸ್ತೆ ವರುಷಗಳಿಂದಲೂ ಇದೇ ರೀತಿಯಲ್ಲಿಯೇ ದುರಸ್ತಿಯಾಗದೇ ಬಾಕಿ ಉಳಿದಿದೆ.







ಜನ ಗುಂಡಿಯಲ್ಲಿ ಎದ್ದು ಬಿದ್ದು ಹೋಗುತ್ತಿದ್ದರು ವೋಟು ಪಡೆದುಕೊಂಡ ಇಲ್ಲಿನ ಜನಪ್ರತಿನಿಧಿಗಳಿಗೆ ನಗರ ಸಭೆಯ ಅಧಿಕಾರಿಗಳಿಗೆ ಈ ಬಗ್ಗೆ ಕ್ಯಾರೇ ಇಲ್ಲ.
ಗುಂಡಿಬೈಲಿನಿಂದ ದೊಡ್ಡಣಗುಡ್ಡೆಗೆ ಹೋಗುವ ಪ್ರಮುಖ ರಸ್ತೆಯಾಗಿದೆ. ಈ ರಸ್ತೆ ಮೂಲಕ ಮಣಿಪಾಲಕ್ಕೂ ನೂರಾರು ವಾಹನಗಳು ,ಅಂಬುಲ್ಯಾನ್ಸ್ ಗಳು ಚಲಿಸುತ್ತಿರುತ್ತವೆ. ರಸ್ತೆ ತುಂಬಾ ಗುಂಡಿಗಳು ತುಂಬಿಕೊಂಡಿರುವುದರಿಂದ ಜನ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಗರ್ಭೀಣಿ ಹೆಂಗಸರು,ಅನಾರೋಗ್ಯ ಪೀಡಿತರು ಈ ರಸ್ತೆಯಲ್ಲಿ ಪ್ರಯಾಣಿಸಿದರಂತೂ ಅವರ ಕಥೆ ಹೇಳೋದೇ ಬೇಡ.
ಹಲವು ವರುಷಗಳಿಂದಲೂ ಇಲ್ಲಿ ಒಳಚರಂಡಿಯ ಅಸಮರ್ಪಕ ಕಾಮಗಾರಿಯಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಒಳ ಚರಂಡಿಯನ್ನು ದುರಸ್ತಿ ಮಾಡುವಂತೆ ಸ್ಥಳಿಯರು ಒತ್ತಾಯಿಸುತ್ತಿದ್ದರೂ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರ ಸಭೆ ಅಧಿಕಾರಿಗಳು ಕಮಿಷನ್ ಆಸೆಗೆ ಬಿದ್ದು ,ಒಳಚರಂಡಿ ದುರಸ್ತಿಯನ್ನೇ ಮಾಡದೇ ಡಾಂಬಾರು ಹಾಕಿದ್ದರು.
ಡಾಂಬಾರು ಕೆಲಸ ಮುಗಿಯುತ್ತಿದ್ದಂತೆ, ಒಳಚರಂಡಿಯ ಪೈಪುಗಳು ಕುಸಿದು ವಾಹನಗಳು ರಸ್ತೆಯಲ್ಲೇ ಹೂತು ಹೋಗಿದ್ದವು.
ಭ್ರಷ್ಟ ಅಧಿಕಾರಿಗಳು ತರಾತುರಿಯಲ್ಲಿ ಹಾಕಿದ್ದ ಡಾಂಬರನ್ನು ಮತ್ತೆ ಅಗೆದು ,ಹೊಸ ಒಳಚರಂಡಿ ಪೈಪು ಲೈನ್ ಹಾಕಲು ಟೆಂಡರು ಕರೆದು ಕೆಲಸ ಮುಗಿಸಿದ್ರು. ಅದು ಕೂಡ ಅವೈಜ್ಞಾನಿಕ ರೀತಿಯಲ್ಲೇ ಒಳಚರಂಡಿ ಪೈಪುಗಳನ್ನ ಹಾಕಿದ್ದರಿಂದ ,ಪೈಪುಗಳು ಒಡೆದು ಇಡೀ ಪ್ರದೇಶದಲ್ಲಿ ಒಳಚರಂಡಿ ನೀರು ಹರಿದು ಗಬ್ಬು ನಾರುತ್ತಿದೆ.
ಇನ್ನೂ ವಿಶೇಷ ಅಂದ್ರೆ ಅಸಮರ್ಪಕ ಒಳಚರಂಡಿ ಕಾಮಗಾರಿ ಮುಗಿಸಿರುವ ಟೆಂಡರ್ ದಾರನಿಗೆ ,ತರಾತುರಿಯಲ್ಲಿ ಬಿಲ್ ಕೂಡ ಪಾಸ್ ಮಾಡಿ ಅಧಿಕಾರಿಗಳು ಕಮಿಷನ್ ಜೋಬಿಗೆ ಹಾಕಿಕೊಂಡಾಗಿದೆ.ಅದ್ರೆ ಒಳ ಚರಂಡಿ ಸಮಸ್ಯೆ ಮಾತ್ರ ಹಾಗೆಯೇ ಬಾಕಿ ಉಳಿದಿದೆ.
ಇದೀಗ ಮತ್ತೆ ರಸ್ತೆಗೆ ಡಾಂಬರು ಹಾಕಲು ಅಧಿಕಾರಿಗಳು ಹಣ ಬಿಡುಗಡೆ ಮಾಡುವ ತರಾತುರಿಯಲ್ಲಿದ್ದಾರೆ. ಈಗಾಗಲೇ ಒಮ್ಮೆ ಹಾಕಿರುವ ಡಾಂಬರು ಕಾಮಾಗಾರಿಯ ಹಣ ಪೊಲಾಗಿದೆ. ಒಳಚರಂಡಿ ಕಾಮಾಗರಿಗೆ ಸುರಿದ ಹಣವೂ ನೀರುಪಾಲಾಗಿದೆ. ಇದೀಗ ಮತ್ತೆ ನಗರ ಸಭೆಯ ಅಧಿಕಾರಿಗಳು ಡಾಂಬರು ಹಾಕಲು ಹೊಸ ಟೆಂಡರ್ ಕರೆಯಲು ಸಿದ್ದರಾಗಿದ್ದಾರಂತೆ.
ಒಟ್ಟಿನಲ್ಲಿ ಗುಂಡಿಬೈಲಿನ ಗುಂಡಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅಕ್ಷಯ ಪಾತ್ರೆಯಂತಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ಕಾಮಾಗಾರಿ ನಡೆಸಿ, ಮತ್ತೆ ಸರಕಾರದ ಹಣ ಹೊಡೆಯಲು ಅಧಿಕಾರಿಗಳ ಹೊಸ ತಂತ್ರವಾಗಿದೆ. ವೋಟು ಪಡೆದ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಕೈ ಸೇರಿಸಿರುವುದರಿಂದ ಜನರ ಸಮಸ್ಯೆಗಳನ್ನ ಕೆಳುವವರಿಲ್ಲವಾಗಿದೆ.