ಉಡುಪಿ, ಅ.23 (DaijiworldNews/PY): ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ವರದಿಯಾಗಿವೆ. ಏಕೆಂದರೆ ಸಂಸ್ಕೃತಿ ಮತ್ತು ಸಂಪ್ರದಾಯಗಳು ಪುರುಷ ಪ್ರಾಬಲ್ಯ ಹೊಂದಿವೆ. ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಹಿಂಸಾಚಾರ ಪ್ರಕರಣಳು ಕೂಡಾ ಹೆಚ್ಚಾಗಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಮಾತ್ರೇ 250 ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಹೇಳಿದರು.




ಶುಕ್ರವಾರ ಬನ್ನಂಜೆಯ ಸರ್ಕ್ಯೂಟ್ ಹೌಸ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರ ಕಿರುಕುಳ ಪ್ರಕರಣಗಳಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಈಶಾನ್ಯ ದೆಹಲಿಯಲ್ಲಿ ಕೆಲವು ಪ್ರಕರಣಗಳಿವೆ. ಏಕೆಂದರೆ, ಅಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ ಮತ್ತು ಶಿಕ್ಷಣದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ್ದಾರೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ 2020 ರ ಜನವರಿಯಿಂದ ಅಕ್ಟೋಬರ್ವರೆಗೆ ಸುಮಾರು 8140 ಪ್ರಕರಣಗಳು ವರದಿಯಾಗಿದ್ದು, 772 ಪ್ರಕರಣಗಳು ಪ್ರಗತಿಯಲ್ಲಿವೆ. 850 ಪ್ರಕರಣಗಳನ್ನು ಮುಚ್ಚಲಾಗಿದ್ದು, 268 ಪ್ರಕರಣಗಳು ಬಾಕಿ ಉಳಿದಿವೆ ಎಂದರು.
ದೆಹಲಿಯಲ್ಲಿ, ಒಟ್ಟು 2035 ಪ್ರಕರಣಗಳಿವೆ. ಈ ಪೈಕಿ 1965 ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 71 ಪ್ರಕರಣಗಳನ್ನು ಮುಚ್ಚಲಾಗಿದ್ದು, 362 ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದರು.
ಮಹಿಳಾ ಕಿರುಕುಳದ ಬಗ್ಗೆ ದೇಶದಲ್ಲಿ ಬಂದ ಒಟ್ಟು ದೂರುಗಳ ಸಂಖ್ಯೆ 17,099 ಆಗಿದ್ದು, ಈ ಪೈಕಿ 16, 533 ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದ್ದು, 566 ಪ್ರಕರಣಗಳು ಬಾಕಿ ಉಳಿದಿವೆ ಹಾಗೂ 3, 296 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ಕರ್ನಾಟಕದಿಂದ ಸುಮಾರು 350 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 337 ಪ್ರಕರಣಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, 13 ಪ್ರಕರಣಗಳು ಬಾಕಿ ಉಳಿದಿದ್ದು, 59 ಪ್ರಕರಣಗಳನ್ನು ಮುಚ್ಚಲಾಗಿದೆ. ಹೆಚ್ಚಿನ ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಂಗಳೂರಿನಲ್ಲಿ ನಡೆಯುತ್ತಿವೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಇಂತಹ ಪ್ರಕರಣಗಳು ಕಡಿಮೆ ವರದಿಯಾಗಿವೆ. ಹೆಚ್ಚಿನ ಪ್ರಕರಣಗಳು ಸೈಬರ್ ಅಪರಾಧ ಮತ್ತು ದೇಶೀಯ ಪ್ರಕರಣಗಳಾಗಿವೆ. ಇದು ವಿದ್ಯಾವಂತರ ಜಿಲ್ಲೆಯಾಗಿದ್ದರೂ ಸಹ ಇಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ 4 ಸಖಿ ಕೇಂದ್ರಗಳು ಮತ್ತು ಉಡುಪಿಯಲ್ಲಿರುವ ಸಖಿ ಕೇಂದ್ರಗಳು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿವೆ. ರಾಷ್ಟ್ರೀಯ ಮಹಿಳಾ ಆಯೋಗವು ಹಿರಿಯ ಮಹಿಳಾ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರನ್ನು ರಕ್ಷಿಸಲು ಬದ್ದವಾಗಿದೆ. ಮಹಿಳಾ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ಕೆಲಸದ ಪ್ರದೇಶದಲ್ಲಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಭಾರತದಾದ್ಯಂತ ನಡೆಯುತ್ತಿರುವ ಇತ್ತೀಚಿಗಿನ ಬೆಳವಣಿಯನ್ನು ಗಮನಿಸುವುದಾದರೆ, ಮಾದಕ ವ್ಯಸನ ಹಾಗೂ ಡ್ರಗ್ ಮಾಫಿಯಾದ ವಿಚಾರ ಎಲ್ಲೆಡೆ ಕೇಳಿ ಬರುತ್ತಿದೆ. ವಿದ್ಯಾರ್ಥಿಗಳು ಈ ಜಾಲಕ್ಕೆ ಪ್ರವೇಶಿಸುತ್ತಿದ್ದಾರೆ. ಕಾಲೇಜು ಕ್ಯಾಂಪಸ್, ಸಣ್ಣ ಅಂಗಡಿಗಳನ್ನು ತೀವ್ರ ಪರೀಕ್ಷೆ ನಡೆಸಬೇಕು. ಏಕೆಂದರೆ, ಇಂತಹ ಜಾಗಗಳು ಡ್ರಗ್ ಪೂರೈಕೆಯ ಪ್ರಮುಖ ಅಂಶವಾಗಿದೆ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಬ್ರಹ್ಮಾವರದಲ್ಲಿ ಆಶಾಕಾರ್ಯಕರ್ತೆಯೊಬ್ಬರು ತಮ್ಮ ಕರ್ತವ್ಯದ ಸಂದರ್ಭ ಮೃತಪಟ್ಟಿದ್ದರು. ಆದರೆ, ಅವರಿಗೆ ಯಾವುದೇ ಪರಿಹಾರ ದೊರೆತಿಲ್ಲ. ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದರು.
ಮಹಿಳಾ ಆಯೋಗ ಯಾವಾಗಲೂ ನ್ಯಾಯದ ಪರ ನಿಲ್ಲುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸ್ವಾತಂತ್ರ್ಯವನ್ನು ನೀಡಬೇಕು. ಪ್ರತಿಯೊಬ್ಬ ಮಹಿಳೆಗೂ ಸಮಾಜದಲ್ಲಿ ಘನತೆಯ ಜೀವನ ನಡೆಸುವ ಹಕ್ಕಿದೆ. ಮಹಿಳೆಯ ಪೈಕಿ ಅನೇಕರಿಗೆ ಕಾನೂನಿನ ಅರಿವಿಲ್ಲ. ತನ್ನನ್ನು ರಕ್ಷಿಸಿಕೊಳ್ಳಲು ಹಾಗೂ ನ್ಯಾಯಾಕ್ಕಾಗಿ ಹೋರಾಡಲು ಮಹಿಳೆಯರಿಗೆ ಕಾನೂನಿನ ಜ್ಞಾನವಿರಬೇಕು ಎಂದು ಹೇಳಿದರು.
ಈ ವೇಳೆ ಮಹಿಳಾ ಪೊಲೀಸ್ ಠಾಣೆಯ ಎಸ್ಐ ಫೆಮಿನಾ, ಡಿವೈಎಸ್ಪಿ ಜೈಶಂಕರ್, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ವೀಣಾ ವಿವೇಕಾನಂದ್ ಉಪಸ್ಥಿತರಿದ್ದರು.