ಬೆಂಗಳೂರು, ಮೇ 24 : ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದ, ರಾಜಸ್ತಾನದ ಯುವಕನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಮನುಷ್ಯತ್ವವನ್ನೇ ಮರೆತ ಸಾರ್ವಜನಿಕರು, ಮನಬಂದಂತೆ ಥಳಿಸಿ ಆತನನ್ನು ಹೊಡೆದು, ಕೊಂದು ಹಾಕಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ಪೆನ್ ಷನ್ ಮೊಹಲ್ಲಾದಲ್ಲಿ ಬುಧವಾರ ನಡೆದಿದೆ.
ಮೃತ ವ್ಯಕ್ತಿಯನ್ನು ರಾಜಸ್ತಾನದ 26 ವರ್ಷದ ಕಾಲುರಾಮ್ ಬಚ್ಚನ್ರಾಮ್ ಎಂದು ಗುರುತಿಸಲಾಗಿದೆ. ಈತ ಉದ್ಯೋಗ ಹುಡುಕಿಕೊಂಡು ಕೆಲ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದು, ಉದ್ದವಾದ ಕೂದಲು ಹಾಗೂ ಗಡ್ಡ ಬಿಟ್ಟಿದ್ದ ಈತನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಬೆನ್ನಟ್ಟಿ ಥಳಿಸಿದ್ದಾರೆ. ತಾನು ಮಕ್ಕಳ ಕಳ್ಳ ಅಲ್ಲ ಎಂದು ಗೋಗೆರೆದರು, ಹಿಗ್ಗಾಮುಗ್ಗಾ ಥಳಿಸಿ, ಕೈಕಾಲು ಕಟ್ಟಿ ರಸ್ತೆಯಲ್ಲೇ ಎಳೆದಾಡಿದ್ದಾರೆ. ಮರದ ದೊಣ್ಣೆ ಹಾಗೂ ಬ್ಯಾಟ್ಗಳಿಂದ ಹೊಡೆದಿದ್ದು ಅಲ್ಲದೆ ಆತನನ್ನು ಸುತ್ತುವರಿದು ಕಾಲುಗಳಿಂದ ಒದ್ದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದು ಹೊಯ್ಸಳ ವಾಹನ ಸ್ಥಳಕ್ಕೆ ತೆರಳುತ್ತಿದ್ದಂತೆ ಸಾರ್ವಜನಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾರಣಂತಿಕ ಏಟುಗಳಿಂದ ಗಂಭೀರ ಗಾಯಗೊಂಡಿದ್ದ, ಕಾಲುರಾಮ್ ನನ್ನು ಪೊಲೀಸರು ಆಸ್ಪತ್ರೆಗೆ ಕರೆಯೊಯ್ದರು ಮಾರ್ಗ ಮದ್ಯೆ ಕಾಲುರಾಮ್ ಮೃತಪಟ್ಟಿದ್ದಾನೆ. ಇದೀಗ ಆತನ ಮೇಲೆ ಹಲ್ಲೆ ಮಾಡಿದ ಸಾರ್ವಜನಿಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಘಟನೆ ಸಂಬಂಧ ಪ್ರಕರಣ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ವ್ಯಕ್ತಿ ನಿಜವಾದ ಮಕ್ಕಳ ಕಳ್ಳನೇ ಆಗಿದ್ದರೂ ಆತನನ್ನು ಪೊಲೀಸರಿಗೆ ಒಪ್ಪಿಸಬೇಕಾಗಿದ್ದ ವಿದ್ಯಾವಂತ ಸಮಾಜ ಮಾನವೀಯತೆ ಮರೆತು ವ್ಯಕ್ತಿಯ ಮೇಲೆ ಮೃಗಗಳಂತೆ ಎರಗಿ ಕೊಂದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.